ಸುಳ್ಯ: ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಸಿ.ಎಂ ಬಸವರಾಜ ಬೊಮ್ಮಾಯಿ: 25 ಲಕ್ಷ ರೂ. ಚೆಕ್ ವಿತರಣೆ
ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆ ಕೇವಲ ಕೊಲೆ ಮಾತ್ರವಲ್ಲ, ಇದೊಂದು ದೇಶ ದ್ರೋಹದ ಕೆಲಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮೃತ ಪ್ರವೀಣ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ನೆಟ್ಟಾರಿನಲ್ಲಿ ಮಾತನಾಡಿದ ಸಿಎಂ, ಎಲ್ಲಾ ಕೋನಗಳಿಂದಲೂ ತನಿಖೆಯಾಗುತ್ತಿದೆ, ಅತೀ ಶೀಘ್ರದಲ್ಲಿ ಅರೋಪಿಗಳ ಬಂಧನವಾಗಲಿದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ವಿಶೇಷವಾಗಿ ಮಂಗಳೂರು ಭಾಗಕ್ಕೆ ಎನ್ ಐಎ ಆಗಬೇಕು, ಅಗತ್ಯ ಬಿದ್ದರೆ ಪ್ರವೀಣ್ ಹತ್ಯೆ ಪ್ರಕರಣವನ್ನು ಎನ್ ಐಎಗೆ ವಹಿಸಲಾಗುವುದು ಎಂದು ಹೇಳಿರುವ ಸಿಎಂ, ಹತ್ಯೆಗೆ ಬೆಂಬಲ ಕೊಟ್ಟವರ ವಿರುದ್ಧವೂ ಕ್ರಮ ಜರುಗಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ರೂಪಾಯಿ ಚೆಕ್ ನೀಡಿದ್ದೇನೆ ಎಂದು ಹೇಳಿರುವ ಬಸವರಾಜ ಬೊಮ್ಮಾಯಿ, ಮಸೂದ್ ಕೊಲೆ ಪ್ರಕರಣಕ್ಕೂ ಪ್ರವೀಣ್ ಕೊಲೆಗೂ ಸಂಬಂಧ ಇದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಾರೆ ಎಂದು ತಿಳಿಸಿದ್ದಾರೆ.