ಬಂಟ್ವಾಳ: ನೇತ್ರಾನತಿ ನದಿಯಲ್ಲಿ ನೀರಿನ ಮಟ್ಟ 8.6 ಮೀ. ಏರಿಕೆ: ಬಂಟ್ವಾಳದ ಸುತ್ತಮುತ್ತಲಿನ ತಗ್ಗು ಪ್ರದೇಶ ಮುಳುಗಡೆ ಭೀತಿ
ಬಂಟ್ವಾಳ: ಇಲ್ಲಿನ ನೇತ್ರಾನತಿ ನದಿಯಲ್ಲಿ ಈ ಬಾರಿ ಪ್ರಥಮ ಬಾರಿಗೆ ನೀರಿನ ಮಟ್ಟ ಭಾನುವಾರ ಬೆಳಿಗ್ಗೆ 8.6 ಮೀ. ಏರಿಕೆಯಾಗಿದೆ. ಇಲ್ಲಿನ ಜಕ್ರಿಬೆಟ್ಟು, ಬಡ್ಡಕಟ್ಟೆ, ಆಲಡ್ಕ, ಸಜಿಪಮುನ್ನೂರು, ನಂದಾವರ, ಶಂಭೂರು, ಕಡೇಶಿವಾಲಯ, ಅಜಿಲಮೊಗರು, ತುಂಬೆ ಮತ್ತಿತರ ತಗ್ಗು ಪ್ರದೇಶಗಳಲ್ಲಿ ಮುಳುಗಡೆ ಭೀತಿ ಆವರಿಸಿದೆ. ಶನಿವಾರ ದಿನವಿಡೀ ಮಳೆಯಾಗಿದ್ದು, ರಾತ್ರಿ ಭಾರೀ ಗಾಳಿ ಮಳೆಯಾಗಿದೆ. ಭಾನುವಾರ ಬೆಳಿಗ್ಗೆ ಕೆಲಹೊತ್ತು ಬಿಸಿಲು ಕಾಣಿಸಿಕೊಂಡಿದ್ದು, ಮಳೆ ಕಡಿಮೆಯಾಗಿದೆ. ಈಗಾಗಲೇ ತಗ್ಗು ಪ್ರದೇಶದ ಸಂತ್ರಸ್ತರನ್ನು ಸ್ಥಳಾಂತರಗೊಳಿಸಲು ವಿವಿಧ ತಂಡ ರಚಿಸಲಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ. ಈ ಬಾರಿ ಗರಿಷ್ಟ ಮಟ್ಟ 9 ಮೀ. ಏರಿಕೆಯಾದರೆ ಕಳೆದ ವರ್ಷದಂತೆ ಬಹುತೇಕ ಕೃಷಿ ಮತ್ತು ವಸತಿ ಪ್ರದೇಶ ಜಲಾವೃತಗೊಳ್ಳಲಿದೆ ಎಂದು ಸಂತ್ರಸ್ತರು ಆತಂಕ ವ್ಯಕ್ತಪಡಿಸಿದ್ದಾರೆ.



