ದ.ಕ ಜಿಲ್ಲೆಯಲ್ಲಿ ಶುಕ್ರವಾರ ಮತ್ತು ಶನಿವಾರ (ಜುಲೈ 8,9) ಶಾಲಾ ಕಾಲೇಜುಗಳಿಗೆ ರಜೆ: ದ.ಕ ಜಿಲ್ಲಾಧಿಕಾರಿ ಆದೇಶ
ಮಂಗಳೂರು: ಕರಾವಳಿಯಲ್ಲಿ ಮಳೆ ಮುಂದುವರೆದ ಹಿನ್ನೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 8,9 ಶುಕ್ರವಾರ ಮತ್ತು ಶನಿವಾರ ಕೂಡ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿಯಲ್ಲಿ ಇಂದು ಕೂಡ ಮಳೆ ಮುಂದುವರೆದಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಕೆಲವು ಕಡೆಗಳಲ್ಲಿ ಜನಜೀವನಕ್ಕೆ ಅಡ್ಡಿ ಸಂಭವಿಸಿದೆ. ರಸ್ತೆಗಳಿಗೆ ಮರ, ಗುಡ್ಡ ಕುಸಿತ ಇತ್ಯಾದಿ ಘಟನೆಗಳು ನಡೆಯುತ್ತಿವೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗುಡ್ಡ ಪ್ರದೇಶ, ಆಯಕಟ್ಟಿನ ಪ್ರದೇಶಗಳಿಂದ ಬರುವವರಾಗಿದ್ದು, ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ನೀಡಿದೆ. ಅಂಗನವಾಡಿ, ಪ್ರಾಥಮಿಕ, ಪ್ರೌಢ, ಕಾಲೇಜು ವಿಭಾಗಗಳಿಗೆ ರಜೆ ನೀಡಲಾಗಿದೆ. ಇನ್ನು ಮಂಗಳವಾರ, ಬುಧವಾರ, ಗುರುವಾರಗಳಂದು ಕೂಡ ದ.ಕ. ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.




