ಪಂಜಿಕಲ್ಲು ಗುಡ್ಡ ಕುಸಿದು ಕಾರ್ಮಿಕರ ಸಾವು ಪ್ರಕರಣ:
ಸಚಿವ ಸುನಿಲ್ ಕುಮಾರ್ ಭೇಟಿ, ಮುನ್ನೆಚ್ಚರಿಕೆ ವಹಿಸಲು ಸೂಚನೆ
ಬಂಟ್ವಾಳ:ಇಲ್ಲಿನ ಪಂಜಿಕಲ್ಲು ಗ್ರಾಮದ ಮುಕ್ಕುಡ ಎಂಬಲ್ಲಿ ಹೆನ್ರಿ ಕಾರ್ಲೋ ಇವರ ಗುಡ್ಡ ಕುಸಿದು ಬಿದ್ದು ಮೂವರು ಸಾವನ್ನಪ್ಪಿದ ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ನೇತೃತ್ವದಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಲ್ಲಿನ ಶೆಡ್ ನೊಳಗೆ ಸಿಲುಕಿಕೊಂಡಿದ್ದ ನಾಲ್ವರು ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ಪೈಕಿ ಮೂವರು ದುರಾದೃಷ್ಟವಶಾತ್ ಮೃತಪಟ್ಟಿದ್ದಾರೆ. ಒಬ್ಬರು ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಧನ ನೀಡುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ.
ಅವಿಭಜಿತ ಜಿಲ್ಲೆಯಾದ್ಯಂತ ಪ್ರಾಕೃತಿಕ ವಿಕೋಪದಿಂದ ಹಾನಿಗೀಡಾದ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡುತ್ತೇನೆ. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಇಂದು ಸಂಜೆ ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ತುರ್ತು ಸಭೆ ಕರೆದು ಸಮಾಲೋಚನೆ ನಡೆಸುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ತಹಶೀಲ್ದಾರ್ ಡಾ.ಸ್ಮಿತಾ ರಾಮು, ಎಸ್ಪಿ ಹೃಷಿಕೇಶ್ ಸೋನವಾಣೆ, ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಎಸೈ ಹರೀಶ್, ಪಿಡಿಒ ವಿದ್ಯಾ ಶಿವಾನಂದ, ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮಕರಣೀಕ ಕುಮಾರ್ ,ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜೀವ ಪೂಜಾರಿ, ಸದಸ್ಯರಾದ ಬಾಲಕೃಷ್ಣ ಪೂಜಾರಿ, ವಿಕೇಶ್, ಮೋಹನ್ ದಾಸ್ , ರೂಪಶ್ರೀ, ನಳಿನಿ ಪ್ರಸಾದ್ , ಜಯಶ್ರೀ, ಗೋಪಾಲ ಕುಲಾಲ್ , ಪೂವಪ್ಪ ಮೆಂಡನ್ , ಹರೀಶ್ ಪೂಜಾರಿ ತಾಕೊಡೆ, ಪ್ರಮುಖರಾದ ಪ್ರಕಾಶ್ ಅಂಚನ್, ಚಿದಾನಂದ, ಶಶಿಧರ್, ಪುರುಷೋತ್ತಮ ಶೆಟ್ಟಿ ವಾಮದಪದವು ,ಪ್ರವೀಣ್ ಮತ್ತಿತರರು ಇದ್ದರು.




