ಕಾಸರಗೋಡು: ಗಲ್ಫ್ ನಿಂದ ಯುವಕನನ್ನು ಊರಿಗೆ ಕರೆಯಿಸಿ ಅಪಹರಿಸಿ ಹತ್ಯೆ: ಮೃತದೇಹವನ್ನು ಆಸ್ಪತ್ರೆಗೆ ದಾಖಲಿಸಿ ಅಪಹರಣಕಾರರು ಪರಾರಿ
ಕಾಸರಗೋಡು: ಗಲ್ಫ್‌ನಿಂದ ಯುವಕನೊಬ್ಬನನ್ನು ಊರಿಗೆ ಕರೆಸಿದ ಕ್ರಿಮಿನಲ್ ಗ್ಯಾಂಗ್ ವೊಂದು ಯುವಕನನ್ನು ಅಪಹರಿಸಿ ನಂತರ ಹತ್ಯೆ ನಡೆಸಿ ಆಸ್ಪತ್ರೆಗೆ ರವಾನಿಸಲಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಕಾಸರಗೋಡು ಕುಂಬಳ ಪೊಲೀಸ್ ಠಾಣಾ ವ್ಯಾಪ್ತಿಯ ಮುಗುವಿನಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ಗಲ್ಫ್ ಉದ್ಯೋಗಿ ಮುಗುವಿನ ಅಬುಬಕರ್ ಸಿದ್ದಿಕ್ (32) ಎಂದು ಗುರುತಿಸಲಾಗಿದೆ.
ಕೆಲವು ವ್ಯವಹಾರದ ವಿಚಾರದಲ್ಲಿ ಸಿದ್ದೀಕ್ ನ ಕುಟುಂಬದ ಇಬ್ಬರನ್ನು ಪೈವಳಿಕೆ ನಿವಾಸಿಗಳು ಎರಡು ದಿವಸ ಮುಂಚೆ ಅಪಹರಣ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಇವರನ್ನು ಬಂಧನದಲ್ಲಿ ಇರಿಸಿ ಗಲ್ಫ್‌ನಿಂದ ಸಿದ್ದಿಕ್ ನನ್ನು ಊರಿಗೆ ಕರೆದು ನಂತರ ಸಿದ್ದೀಕ್ ನನ್ನು ಅಪಹರಣ ಮಾಡಿದ್ದಾರೆ. ಮಧ್ಯಾಹ್ನ ಸಿದ್ದೀಕ್ ನನ್ನು ಅಪಹರಿಸಿದ ತಂಡವು ರಾತ್ರಿ ವೇಳೆ ಆಸ್ಪತ್ರೆಗೆ ವಾಹನದಲ್ಲಿ ದಾಖಲಿಸಿದ್ದಾರೆ. ಅಷ್ಟರಲ್ಲಿ ಸಿದ್ದೀಕ್ ಮೃತಪಟ್ಟಿದ್ದು, ಅಪಹರಣಕಾರರು ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಡಿವೈಎಸ್ಪಿ ಪಿ ಬಾಲಕೃಷ್ಣನ್ ನೇತೃತ್ವದಲ್ಲಿ ಕಾಸರಗೋಡು ಪೊಲೀಸರು ಘಟನೆಯ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆರೋಪಿಗಳ ಬಗ್ಗೆ ಕೆಲ ಸುಳಿವು ಸಿಕ್ಕಿದೆ ಎಂದು ತಿಳಿದು ಬಂದಿದೆ. ವಿದೇಶಿ ಕರೆನ್ಸಿ ಕಳ್ಳಸಾಗಣೆ ವಿಚಾರವಾಗಿ ನಡೆದ ವಿವಾದ ಕೊಲೆಗೆ ಕಾರಣ ಎನ್ನಲಾಗಿದೆ. ಸಿದ್ದಿಕ್ ಅವರನ್ನು ಬಂದಿಯೋಡು ಡಿಎಂ ಆಸ್ಪತ್ರೆಗೆ ರವಾನಿಸಲಾಗಿದೆ. ಜೊತೆಗಿದ್ದವರು ಪರಾರಿಯಾದ ವಿಷಯವನ್ನು ಆಸ್ಪತ್ರೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗುವುದು ಎಂದು ಡಿವೈಎಸ್ಪಿ ತಿಳಿಸಿದ್ದಾರೆ.




