ಹಾಸನ ಜಿಲ್ಲೆಯ ಕೆಲವೆಡೆ ಕಂಪಿಸಿದ ಭೂಮಿ: ಮನೆಯಿಂದ ಹೊರಗೆ ಓಡಿ ಬಂದ ಜನರು
ಹಾಸನ: ಜಿಲ್ಲೆಯ ಕೆಲವೆಡೆ ಗುರುವಾರ ಬೆಳಗಿನ ಜಾವ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದರು.
ಬೆಳಗಿನ ಜಾವ 4.37 ರ ಸುಮಾರಿಗೆ ಕೆಲಕಾಲ ಭೂಮಿ ಕಂಪಿಸಿದೆ. ನಿದ್ರೆಯ ಮಂಪರಿನಲ್ಲಿದ್ದ ಜನರು ಗಾಬರಿಗೊಂಡು ಮನೆಗಳಿಂದ ಹೊರಬಂದರು.
ಹೊಳೆನರಸೀಪುರ ತಾಲ್ಲೂಕಿನ ಮಾಲುಗೇನಹಳ್ಳಿಯಲ್ಲಿ ಕಂಪನ ಕೇಂದ್ರವಾಗಿದ್ದು, ಸುತ್ತಲಿನ 40–50 ಕಿ.ಮೀ. ವ್ಯಾಪ್ತಿಯಲ್ಲಿ ಕಂಪನದ ಅನುಭವವಾಗಿದೆ. ಇದರ ತೀವ್ರತೆ 3.4 ಮ್ಯಾಗ್ನಿಟ್ಯೂಡ್ ಆಗಿತ್ತು.
ಈ ರೀತಿಯ ಕಂಪನದಿಂದ ಯಾವುದೇ ಹಾನಿ ಉಂಟಾಗುವುದಿಲ್ಲ. ಈ ಎಪಿಸೆಂಟರ್ ಸೆಸ್ಮಿಕ್ ವಲಯ 2 ರ ಅಡಿ ಬರುತ್ತಿದ್ದು, ಭೂಕಂಪನದ ಸಾಧ್ಯತೆಗಳು ಕಡಿಮೆ ಇರುತ್ತವೆ. ಅಲ್ಲದೇ ಹಾನಿ ಆಗುವ ಸಾಧ್ಯತೆಗಳು ಕಡಿಮೆ. ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ.




