ಸಂಪಾಜೆ: ಗೇಟ್ ಪಾಸ್ ಮಾಡಲು ಎಂಟ್ರಿಫೀಸ್ ಕೇಳಿದ ಆರೋಪ: ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್
ಸಂಪಾಜೆ: ಕೊಡಗು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಸಂಪಾಜೆ ತನಿಖಾ ಗೇಟಿನಲ್ಲಿ ಮಡಿಕೇರಿಯಿಂದ ಮರ್ಕಂಜಕ್ಕೆ ಭತ್ತದ ಹೊಟ್ಟನ್ನು ತರುತ್ತಿದ್ದ ಪಿಕಪ್ ಚಾಲಕನ ಜೊತೆ ಎಂಟ್ರಿ ನೆಪದಲ್ಲಿ ಅರಣ್ಯ ಸಿಬ್ಬಂದಿಯೋರ್ವರು ಲಂಚ ಕೇಳಿದ್ದಾರೆ ಎಂಬ ಆರೋಪ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ.
ಅರಣ್ಯ ಸಿಬ್ಬಂದಿ ಪಿಕಪ್ ಚಾಲಕನ ಬಳಿ ಎಂಟ್ರಿ ಹಣದ ರೂಪದಲ್ಲಿ ಹಣಕ್ಕೆ ಬೇಡಿಕೆ ಇಡುವ ವಿಡಿಯೋ ಈ ದೃಶ್ಯದಲ್ಲಿ ಕಂಡುಬರುತ್ತಿದೆ.
ಮರ್ಕಂಜದ ರಾಜೇಶ್ ಎಂಬವರು ಹೈದಂಗೂರುವಿಗೆ ಕೋಳಿ ಸಾಕಾಣಿಕೆ ಮಾಡಲು ಮಡಿಕೇರಿಯಿಂದ ಭತ್ತದ ಹೊಟ್ಟು ತರುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಸಂಪಾಜೆ ಗೇಟ್ ನ ಬಳಿ ಬಂದಾಗ ಅಲ್ಲಿ ಅರಣ್ಯಾ ಇಲಾಖೆಯ ಸಿಬ್ಬಂದಿಗಳು ತಪಾಸಣೆಗೆ ಪಿಕಪ್ ವಾಹನವನ್ನು ನಿಲ್ಲಿಸಿದ್ದರು ಎನ್ನಲಾಗಿದೆ.
ಚಾಲಕ ರಾಜೇಶ್ ರವರು ವಾಹನ ನಿಲ್ಲಿಸಿ ಅರಣ್ಯ ಇಲಾಖೆಯ ತಪಸಣಾ ಕೇಂದ್ರಕ್ಕೆ ಹೋದಾಗ ಅಲ್ಲಿ ವಾಹನದ ವಿವರ ಕೇಳಿದ ಅಧಿಕಾರಿ ಎಂಟ್ರಿ ನೆಪದಲ್ಲಿ ಹಣ ಕೇಳುತ್ತಿರುವ ವಿಡಿಯೋ ದೃಶ್ಯ ಇದರಲ್ಲಿದ್ದು ಇದನ್ನು ನಿರಾಕರಿಸಿದಾಗ ವಾಹನವನ್ನು ಚೆಕ್ ಮಾಡಿ ನಾಳೆ ಬಿಡ್ತಿನಿ… ಎಂದರಲ್ಲದೆ ಬಿಲ್ ತೋರಿಸುವಂತೆ ತಾಕೀತು ಮಾಡುತ್ತಿರುವ ದೃಶ್ಯ ಕೂಡ ಕಂಡುಬರುತ್ತಿದೆ. ನಂತರ ಚಾಲಕ ವಾಹನ ತಪಾಸಣೆ ಮಾಡಿ ಬನ್ನಿ ಸರ್ ಅಂದಾಗ ಭತ್ತದ ಹೊಟ್ಟಿಗೆ ಬಿಲ್ ಕೇಳಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಅಂತೂ ಯುವಕ ಹಣ ನೀಡದೆ ತಮ್ಮ ಪಿಕಪ್ ವಾಹನದೊಂದಿಗೆ ಗೇಟ್ ಪಾಸ್ ಮಾಡಿದ್ದಾರೆ. ಎಂಟ್ರಿ ನೆಪದಲ್ಲಿ ಲಂಚ ಕೇಳುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದೇ ಪಿಕಪ್ ಚಾಲಕನ ಬಳಿ ಈ ಹಿಂದೆಯೂ ಈ ಅಧಿಕಾರಿ ಇದೇ ರೀತಿಯ ವರ್ತನೆ ತೋರಿದ್ದು, ಆ ವೀಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ಮತ್ತೆ ಎರಡನೇ ಬಾರಿ ಎಂಟ್ರಿ ನೆಪದಲ್ಲಿ ಹಣ ಕೇಳುತ್ತಿರುವುದು ಕಂಡುಬಂದಿದೆ.
ಸಂಪಾಜೆ ಚೆಕ್ ಫೋಸ್ಟ್ ನಲ್ಲಿ ಲಂಚಾವತಾರದ ವಿಡಿಯೋಗಳು ಈ ಹಿಂದೆಯೂ ವೈರಲ್ ಆಗಿದ್ದವು. ಇದರಿಂದ ಅರಣ್ಯಾಧಿಕಾರಿಯೋರ್ವರ ಅಮಾನತು ಕೂಡಾ ನಡೆದಿತ್ತು.




