ಸುಳ್ಯ: ಯುವಕನ ಮೇಲೆ ಶೂಟೌಟ್ ಪ್ರಕರಣ, ಮೂವರು ಆರೋಪಿಗಳ ವಶಕ್ಕೆ
ಸುಳ್ಯ: ಯುವಕನ ಮೇಲೆ ರವಿವಾರ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳನ್ನು ಕುಶಾಲನಗರ ಬೊಳ್ಳುರು ನಿವಾಸಿ ಜಯನ್(38), ಮಡಿಕೇರಿಯ ಮುಳಿಯ ಲೇ ಔಟ್ ನ ವಿನೋದ್ ಆರ್ (34), ಮಡಿಕೇರಿಯ ರಾಣಿ ಬೆಟ್ಟು ನಿವಾಸಿ ಮನೋಜ್(25) ಎಂದು ಗುರುತಿಸಲಾಗಿದೆ.
ಸುಳ್ಯದ ಜಯನಗರದ ಮಹಮ್ಮದ್ ಶಾಹಿ ತನ್ನ ಕಾರಿನ ಬಳಿ ಇದ್ದ ಸಂದರ್ಭ ಅಪರಿಚಿತರ ತಂಡ ಸ್ಕಾರ್ಪಿಯೋದಲ್ಲಿ ಬಂದು ಗುಂಡು ಹೊಡೆದಿದ್ದರು. ಅದು ಕಾರಿಗೆ ತಾಗಿ ಯುವಕ ಅಪಾಯದಿಂದ ಪಾರಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ನಾಡ ಪಿಸ್ತೂಲು ಮತ್ತು ಎರಡು ಸಜೀವ ತೋಟೆಗಳನ್ನು ಹಾಗೂ ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಭಗವಾನ್ ಸೋಣಾವನೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ, ಪುತ್ತೂರು ಉಪವಿಭಾಗ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನಾ ಪಿ ಕುಮಾರಿ ಮತ್ತು ಸುಳ್ಯ ಪೊಲೀಸು ವೃತ್ತ ನಿರೀಕ್ಷಕರಾದ ನವೀನ್ ಚಂದ್ರ ಜೋಗಿ ರವರ ಮಾರ್ಗದರ್ಶನದಂತೆ ಸುಳ್ಯ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ದಿಲೀಪ್ ಜಿ ಆರ್, ಪಿಎಸ್ಐ ರತ್ನಕುಮಾರ್, ಸರಸ್ವತಿ ಬಿ.ಟಿ, ಎಎಸ್ಐ ರವೀಂದ್ರ,ಎಎಸ್ಐ ಶಿವರಾಮ, ಧನೇಶ್, ಉದಯ ಗೌಡ, ಅನಿಲ್, ಅನುಕುಮಾರ್, ಹೈದರಾಲಿ,ಸುನಿಲ್ ತಿವಾರಿ,ನಾಗರಾಜ್ ಮತ್ತು ಇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.




