March 26, 2026

ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣ:
ಎಐಎಂಐಎಂ ಶಾಸಕನ ಪುತ್ರ ಸಹಿತ ಐವರು ಆರೋಪಿಗಳ ಬಂಧನ

0
image_editor_output_image-1385637149-1654665224848.jpg

ಹೈದರಾಬಾದ್: ಇಲ್ಲಿನ ಜುಬಿಲಿ– ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲ ಪ್ರಮುಖ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಪೈಕಿ ನಾಲ್ವರು ಬಾಲಾರೋಪಿಗಳಾಗಿದ್ದು, ಮತ್ತೊಬ್ಬ ವಯಸ್ಕ ಆರೋಪಿಯನ್ನು ಸದುದ್ದೀನ್ ಮಲಿಕ್ (18 ವರ್ಷ) ಎಂದು ಗುರುತಿಸಲಾಗಿದೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣದ ಆರನೇ ಬಾಲಾರೋಪಿಯಾಗಿ ಎಐಎಂಐಎಂ ಶಾಸಕನ ಪುತ್ರನನ್ನು ಹೆಸರಿಸಲಾಗಿದ್ದು, ಆತನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದುದ್ದೀನ್ ಮಲಿಕ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ), 323 (ಆಘಾತ ಉಂಟುಮಾಡಲು ಕಾರಣರಾಗುವುದು), 366 (ಅಪಹರಣ) ಹಾಗೂ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ವಿಡಿಯೊ ಚಿತ್ರೀಕರಣ ಮಾಡಿದ ಆರೋಪದಲ್ಲಿ ಐಟಿ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಿಸಲಾಗಿದೆ.

‘ಐವರು ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಶಿಕ್ಷೆಯು 20 ವರ್ಷಗಳಿಗಿಂತ ಕಡಿಮೆ ಇರಲಾರದು. ಪ್ರಕರಣದ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ರಚಿಸಲಾಗುವುದು. ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯವಿದೆ’ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಸಿ.ವಿ. ಆನಂದ್ ತಿಳಿಸಿದ್ದಾರೆ.

ಆರನೇ ಆರೋಪಿಯು ಅತ್ಯಾಚಾರದಲ್ಲಿ ಭಾಗಿಯಾಗಿಲ್ಲವಾದರೂ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಮಹಿಳೆಯ ವಿರುದ್ಧ ಅಪರಾಧ ಪ್ರಕರಣ) ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಲಾಗಿದೆ. ಆತನಿಗೂ 5–7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!