ಕಾಸರಗೋಡು: ನಾಮಪತ್ರ ಹಿಂಪಡೆಯಲು ಲಂಚ ನೀಡಿದ ಪ್ರಕರಣ: ಕೆ. ಸುರೇಂದ್ರನ್ ವಿರುದ್ಧ ಜಾಮೀನು ರಹಿತ ಮೊಕದ್ದಮೆ ದಾಖಲು
ಕಾಸರಗೋಡು: ನಾಮಪತ್ರ ಹಿಂದಕ್ಕೆ ಪಡೆಯಲು ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ವಿರುದ್ಧ ಕ್ರೈಂ ಬ್ರಾಂಚ್ ಪೊಲೀಸರು ಜಾಮೀನು ರಹಿತ ಮೊಕದ್ದಮೆ ಹೂಡಿದ್ದಾರೆ.
ಪ್ರಕರಣ ದಾಖಲಿಸಿದ ಒಂದು ವರ್ಷದ ನಂತರ ಅಪರಾಧ ವಿಭಾಗದವರು ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ಹೊಸ ಆರೋಪಗಳನ್ನು ಸೇರಿಸಲಾಗಿದೆ.
ಸುರೇಂದ್ರನ್ 2021 ರ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷದ ಮಂಜೇಶ್ವರಂ ಅಭ್ಯರ್ಥಿ ಕೆ ಸುಂದರ ಅವರಿಗೆ ಬೆದರಿಕೆ ಮತ್ತು ಲಂಚ ನೀಡಿದ ಆರೋಪವಿದೆ. ನಾಮಪತ್ರ ಹಿಂಪಡೆಯಲು ಮಂಗಳೂರಿನಲ್ಲಿ 15 ಲಕ್ಷ ರೂಪಾಯಿ ಹಾಗೂ ವೈನ್ ಪಾರ್ಲರ್ ಪರವಾನಗಿ ನೀಡುವುದಾಗಿ ಸುಂದರ್ ಆರೋಪಿಸಿದ್ದರು. ಆದರೆ, ಅವರಿಗೆ ಕೇವಲ 2.5 ಲಕ್ಷ ರೂಪಾಯಿ ಹಾಗೂ ಮೊಬೈಲ್ ಫೋನ್ ನೀಡಲಾಗಿದೆ. ಅದನ್ನು ತನಿಖಾ ತಂಡ ವಶಪಡಿಸಿಕೊಂಡಿದೆ.
ಪರಿಶಿಷ್ಟ ಜಾತಿ – ಪಂಗಡದ ಅತಿಕ್ರಮ ತಡೆ ಕಾಯ್ದೆಯಡಿ ಮೊಕದ್ದಮೆ ಹೂಡಲಾಗಿದ್ದು, ಸುರೇಂದ್ರನ್ ಸೇರಿದಂತೆ ಆರು ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಕಾಸರಗೋಡು ಹೆಚ್ಚುವರಿ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಕ್ರೈಂ ಬ್ರಾಂಚ್ ಮಧ್ಯಂತರ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಸುರೇಂದ್ರನ್ ವಿರುದ್ಧ ಹೊಸ ಮೊಕದ್ದಮೆ ಸೇರಿಸಲಾಗಿದೆ.




