ಸುಳ್ಯ: ಯುವಕನ ಮೇಲೆ ಗುಂಡಿನ ದಾಳಿ: ಮಧ್ಯೆರಾತ್ರಿ ಅಪರಿಚಿತ ತಂಡದಿಂದ ಕೃತ್ಯ
ಸುಳ್ಯ: ಜಯನಗರ ನಿವಾಸಿ ಷಾಹಿ ಜಟ್ಟಿಪಳ್ಳ ಎಂಬುವವರ ಮೇಲೆ ನಿನ್ನೆ ರಾತ್ರಿ 10.30 ರ ಸಮಯಕ್ಕೆ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದೆ.
ಷಾಹಿ ಅವರು ಸುಳ್ಯ ಜಯನಗರ ನಿವಾಸಿಯಾಗಿದ್ದು, ಗುತ್ತಿಗೆದಾರ ಮತ್ತು ಕಟ್ಟಡ ಸಾಮಾಗ್ರಿಗಳ ವಿತರಕರಾಗಿ ಕೆಲಸ ನಿರ್ವಹಿಸುತಿದ್ದರು.
ಅವರು ನಿನ್ನೆ ರಾತ್ರಿ ಹತ್ತು ಮೂವತ್ತರ ಸಮಯಕ್ಕೆ ಸುಳ್ಯದ ಮೊಗರ್ಪಣೆ ಯಲ್ಲಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬಳಿ ತನ್ನ ತಂಗಿಯ ಮನೆಗೆ ಹೋಗಿ ಹಿಂತಿರುಗಿ ಬಂದು ಮುಖ್ಯ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ತನ್ನ ಕಾರನ್ನು ಏರುತ್ತಿರುವ ಸಂದರ್ಭ ಹಿಂದಿನಿಂದ ಸ್ಕಾರ್ಪಿಯೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಷಾಯಿರವರ ಕಡೆಗೆ ಗುಂಡು ಹಾರಿಸಿದ್ದಾರೆ. ದುಷ್ಕರ್ಮಿಗಳು ಹಾರಿಸಿದ ಗುಂಡು ಅದೃಷ್ಟವಶಾತ್ ಅವರಿಗೆ ತಾಗದೆ ಅವರ ಕಾರಿಗೆ ತಾಗಿ ಗುಂಡಿನ ಚಿಲ್ಲ್ ಛಿದ್ರವಾಗಿ ಷಾಯಿಯವರ ಹೊಟ್ಟೆಯ ಸಮೀಪಕ್ಕೆ ತಾಗಿ ಅಲ್ಪಮಟ್ಟಿಗೆ ಗಾಯವಾಗಿದೆ. ಕೂಡಲೇ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.






