ಪಡುಬಿದ್ರಿ: ತಲವಾರಿನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ: ಮೂವರು ಅರೆಸ್ಟ್
ಪಡುಬಿದ್ರಿ: ತಲವಾರಿನಿಂದ ಕೇಕ್ ಕತ್ತರಿಸಿ ಆಚರಿಸಿದ ವೇಳೆ ತಲವಾರು ಮತ್ತು ಕೊಡಲಿಗಳನ್ನೂ ಇಟ್ಟುಕೊಂಡೇ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ಘಟನೆ ಕಾರ್ಕಳ ರಸ್ತೆಯ ಮನೆಯೊಂದರಲ್ಲಿ ನಡೆದಿತ್ತು. ಕಾರ್ಕಳ ರಸ್ತೆಯ ಮನೆಯೊಂದರಲ್ಲಿ ಮೇ 30ರಂದು ಹುಟ್ಟುಹಬ್ಬವನ್ನು ಅಚರಿಸಿದ್ದಕ್ಕೆ ರೌಡಿಶೀಟರ್ ಜಿತೇಂದ್ರ ಶೆಟ್ಟಿ ಹಾಗೂ ಆತನ ಸಹಚರರ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿತೇಂದ್ರ ಶೆಟ್ಟಿ ಸಹಿತ ಪಲಿಮಾರಿನ ಸೂರಜ್ ಸಾಲ್ಯಾನ್, ನಡಾಲಿನ ತನುಜ್ ಕರ್ಕೇರ, ಪಡುಬಿದ್ರಿಯ ಅನ್ವೀಶ್, ಕೆಮ್ಮುಂಡೇಲಿನ ನಿರಂಜನ್ ಶೆಟ್ಟಿಗಾರ್, ಕಂಚಿನಡ್ಕದ ಗಣೇಶ್ ಪೂಜಾರಿ, ಪಲಿಮಾರಿನ ಶರತ್ ಶೆಟ್ಟಿ ಈ ಪ್ರಕರಣದ ಆರೋಪಿಗಳಾಗಿದ್ದಾರೆ. ದಾಳಿ ನಡೆದ ವೇಳೆ ಅಲ್ಲಿದ್ದ ರೌಡಿಶೀಟರ್ ಜಿತೇಂದ್ರ ಶೆಟ್ಟಿ ಹಾಗೂ ಗಣೇಶ್ ಪೂಜಾರಿ, ಶರತ್ ಶೆಟ್ಟಿಯನ್ನು ಬಂಧಿಸಲಾಗಿದೆ.
ಶಸ್ತ್ರಾಸ್ತ್ರ ಕಾಯ್ದೆಯಡಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿ ಪುರುಷೋತ್ತಮ ಹಾಗೂ ಸಿಬಂದಿ ಒಂದು ತಲವಾರು, ಒಂದು ಮಚ್ಚು ಹಾಗೂ ಒಂದು ಕೊಡಲಿಯನ್ನು ವಶಪಡಿಸಿಕೊಂಡಿದ್ದಾರೆ.




