ರಾಘವೇಂದ್ರ ಶೆಟ್ಟಿ ನನ್ನ ಮುಖಕ್ಕೆ ಆ್ಯಸಿಡ್ ಎರಚಿಸುವ ಬೆದರಿಕೆ: ಡಿ.ರೂಪಾ ಆರೋಪ
ಬೆಂಗಳೂರು: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ಮಧ್ಯದ ಕಿತ್ತಾಟ ಇನ್ನೂ ತಾರಕಕ್ಕೇರಿದೆ.
ರಾಘವೇಂದ್ರ ಶೆಟ್ಟಿ ಅವರು ರೂಪಾ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರನ್ನು ಗುರುವಾರ ಭೇಟಿ ಮಾಡಿ ದೂರು ನೀಡಿದ್ದಾರೆ.
ಈ ಮಧ್ಯೆ ಮೇ 27 ರಂದು ನಡೆದ ನಿಗಮದ ವಾರ್ಷಿಕ ಸಭೆಯಲ್ಲಿ ಇಬ್ಬರ ಮಧ್ಯದ ವಾಕ್ಸಮರದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ‘ತಾವು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ರೂಪಾ ಅವರೇ ಕಾರಣರು’ ಎಂದು ಸಭೆಯಲ್ಲಿ ಎಲ್ಲರ ಮುಂದೆ ರಾಘವೇಂದ್ರ ಹೇಳಿರುವುದು ವಿಡಿಯೊದಲ್ಲಿದೆ.
‘ಅಧ್ಯಕ್ಷ ರಾಘವೇಂದ್ರ ಶೆಟ್ಟಿ ನನ್ನ ಮುಖಕ್ಕೆ ಆ್ಯಸಿಡ್ ಎರಚಿಸುವ ಬೆದರಿಕೆ ಹಾಕಿದ್ದು, ನಾನು ಇಂತಹ ಬೆದರಿಕೆಗಳನ್ನು ಲೆಕ್ಕಿಸದೇ ಕೆಲಸ ಮಾಡುತ್ತಾ ಇದ್ದೇನೆ. ಸರ್ಕಾರಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಆ್ಯಸಿಡ್ ಬೆದರಿಕೆಯನ್ನು ಎಲ್ಲೂ ಹೇಳಿಲ್ಲ’ ಎಂದು ಡಿ.ರೂಪಾ ಪ್ರತಿಕ್ರಿಯಿಸಿದ್ದಾರೆ.
‘ನಿಗಮದ ಸಭೆಯಲ್ಲಿ ರಾಘವೇಂದ್ರ ಶೆಟ್ಟಿ ಅವರು ಮಾತನಾಡುತ್ತಾ ತಾನು ಖಿನ್ನತೆಗೆ ಒಳಗಾದರೆ ರೂಪಾ ಅವರೇ ಕಾರಣ ಎಂದು ಬೆದರಿಕೆ ಹಾಕಿದ್ದಾರೆ. ಸಭೆಯಲ್ಲಿ ಒಂದು ಗಂಟೆ ಕೂಗಾಡುತ್ತಾ, ಸಭೆ ನಡೆಸಲು ಬಿಡುವುದಿಲ್ಲ ಎಂದು, ಆತ್ಮಹತ್ಯೆ ಬೆದರಿಕೆ ಒಡ್ಡುವುದು ಐಪಿಸಿ ಪ್ರಕಾರ ಶಿಕ್ಷಾರ್ಹ ಅಪರಾಧ. ಇದರ ಬಗ್ಗೆ ಪ್ರಕರಣ ದಾಖಲಿಸಲು ಅನುಮತಿ ಕೊಡಬೇಕು ಎಂದು ಆರು ಪುಟಗಳ ವರದಿಯಲ್ಲಿ ಮುಖ್ಯಕಾರ್ಯದರ್ಶಿಯವರಿಗೆ ಕೋರಿದ್ದೇನೆ’ ಎಂದು ಹೇಳಿದ್ದಾರೆ.




