ವಿಟ್ಲ: ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಾಟ ಪ್ರಕರಣ: ನ್ಯಾಯ ಬೆಲೆ ಅಂಗಡಿಯ ಇಬ್ಬರು ಮಾಲಕರು ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು
ವಿಟ್ಲ: ಬೋಳಂತೂರು ಗ್ರಾಮದ ನಾರ್ಶ ಎಂಬಲ್ಲಿ ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಮೂವರು ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೋಳಂತೂರು ಗ್ರಾಮದ ಕಲ್ಪನೆ ನಿವಾಸಿ ಅಬೂಬಕ್ಕರ್ ಬಿ, ನಾರ್ಶ ನಿವಾಸಿ ಹಮೀದ್ ನಾರ್ಶ್, ಮಡಿಕೇರಿ ನಿವಾಸಿ ಚಾಲಕ ಚಂದ್ರೇಶ್ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಚಾಲಕ ಚಂದ್ರೇಶ್ ನನ್ನು ಈಗಾಗಲೇ ಬಂಧಿಸಲಾಗಿದೆ.
ವಿಟ್ಲ ಹೋಬಳಿಯ ಬೋಳಂತ್ತೂರು ಗ್ರಾಮದ ಎನ್ ಸಿ ರೋಡ್ ಎಂಬಲ್ಲಿ ನಾರ್ಶ್ ದಿಂದ ಬೋಳಂತ್ತೂರು ಕಡೆಗೆ ಲಾರಿಯಲ್ಲಿ ಅನ್ನಭಾಗ್ಯದ ಅಕ್ಕಿಗಳನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಾಹನವನ್ನು ತಡೆದು ವಶಕ್ಕೆ ಪಡೆದುಕೊಂಡಿದ್ದರು.
ಸರಕಾರದಿಂದ ಸಾರ್ವಜನಿಕರಿಗೆ ವಿತರಿಸಲ್ಪಟ್ಟ ಉಚಿತ ಪಡಿತರ ಅಕ್ಕಿಗಳುಳ್ಳ 313 ಚೀಲಗಳನ್ನು ಅಕ್ರಮವಾಗಿ ಯಾವುದೇ ದಾಖಲಾತಿಗಳಿಲ್ಲದೇ ಸಾಗಾಟ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ವಿಟ್ಲ ಹೋಬಳಿಯ ಬೋಳಂತ್ತೂರು ಗ್ರಾಮದ ನ್ಯಾಯಾಬೆಲೆ ಅಂಗಡಿ ಸಂಖ್ಯೆ 68 ಅಬೂಬಕ್ಕರ್ ಬಿ ಕಲ್ಪನೆ ಅವರಿಂದ 235 ಚೀಲ ಅಕ್ಕಿಯನ್ನು ಹಾಗೂ ಅಂಗಡಿ ಸಂಖ್ಯೆ 105 (ಹಮೀದ್ ನಾರ್ಶ್ ಕೋಲ್ನಾಡು) ರವರಿಂದ 78 ಚೀಲ ಅಕ್ಕಿಯನ್ನು ಪಡೆದುಕೊಂಡು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಇವರ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.




