ಅಶ್ಲೀಲ ವೀಡಿಯೊವನ್ನು ಚಿತ್ರೀಕರಿಸಿದ ಆರೋಪ: ನಟಿ ಪೂನಂ ಪಾಂಡೆ ವಿರುದ್ಧ ಚಾರ್ಜ್ ಶೀಟ್

ಪಣಜಿ: ಅಶ್ಲೀಲ ವೀಡಿಯೊವನ್ನು ಚಿತ್ರೀಕರಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡೆಲ್-ನಟಿ ಪೂನಂ ಪಾಂಡೆ ಮತ್ತು ಸ್ಯಾಮ್ ಬಾಂಬೆ ವಿರುದ್ಧ ಗೋವಾ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಅಶ್ಲೀಲತೆ, ಅತಿಕ್ರಮಣ ಮತ್ತು ಅಶ್ಲೀಲ ವೀಡಿಯೊ ಪ್ರಸಾರಕ್ಕೆ ಸಂಬಂಧಿಸಿದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೆನಕೋನ ಜ್ಯುಡಿಷಿಯಲ್ ಪ್ರಥಮ ದರ್ಜೆ ನ್ಯಾಯಾಧೀಶರ ಮುಂದೆ ಕಳೆದ ವಾರ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಕೆನಕೋನಾ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ಗವಾಸ್ ತಿಳಿಸಿದರು.
ಪೂನಂ ಮತ್ತು ಸ್ಯಾಮ್ ನವೆಂಬರ್ 2020ರಲ್ಲಿ ಕೆನಕೋನಾ ಪ್ರದೇಶದ ಸರ್ಕಾರಿ ಸ್ವಾಮ್ಯದ ಚಾಪೋಲಿ ಅಣೆಕಟ್ಟಿನಲ್ಲಿ ಅಶ್ಲೀಲ ವೀಡಿಯೊವನ್ನು ಚಿತ್ರೀಕರಿಸಿ ಅದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇಬ್ಬರನ್ನೂ ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಪೊಲೀಸರು 39 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಪ್ರಕರಣದ ವಿಚಾರಣೆಯ ಸಮಯದಲ್ಲಿ ಅವರನ್ನು ನ್ಯಾಯಾಲಯವು ಪರಿಶೀಲಿಸುತ್ತದೆ ಎಂದು ಗವಾಸ್ ಹೇಳಿದರು.