ಗುಡುಗು ಸಹಿತ ಗಾಳಿ ಮಳೆ: ಇಬ್ಬರು ಸಾವು, ಹಲವಾರು ಮಂದಿ ಗಾಯ, ಮರ ಬಿದ್ದು 50ಕ್ಕೂ ಹೆಚ್ಚು ವಾಹನಗಳ ಜಖಂ
ಹೊಸದಿಲ್ಲಿ: ಬಿಸಿಗಾಳಿಯ ಬೇಗೆಯಿಂದ ತತ್ತರಿಸಿ ಹೋಗಿದ್ದ ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಸೋಮವಾರ ವಸ್ತುಶಃ ಹಾರಿ ಹೋಗಿದೆ. ಸಂಜೆಯ ವೇಳೆಗೆ ಗಾಳಿ ಮತ್ತು ಗುಡುಗು ಸಹಿತ ಸುರಿದ ಧಾರಾಕಾರ ಮಳೆಯಿಂದ ತಂಪಾಗಿದೆ.
ಮಳೆಯೊಂದಿಗೆ ಗಂಟೆಗೆ ಗರಿಷ್ಠ 100 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದೆ. ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇಬ್ಬರು ಸಾವಿಗೀಡಾಗಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. 50ಕ್ಕೂ ಹೆಚ್ಚು ವಾಹನಗಳ ಮೇಲೆ ಮರ ಬಿದ್ದು ಜಖಂ ಆಗಿವೆ.
ಜಾಮಾ ಮಸೀದಿಯ ಡೋಮ್‌ನ ತುದಿ ತುಂಡಾಗಿ ಬಿದ್ದಿದೆ. ಇಬ್ಬರು ಗಾಯಗೊಂಡಿದ್ದಾರೆ. ಗಾಳಿಯ ವೇಗ ಹೆಚ್ಚಿದ್ದರಿಂದಾಗಿ ವಿಮಾನಗಳ ಸಂಚಾರಕ್ಕೂ ತೊಂದರೆ ಯುಂಟಾಗಿದೆ. 70 ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಆಗಿದ್ದಾಗಿ ಹೊಸದಿಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಬಿರುಸಾಗಿ ಬೀಸಿದ ಗಾಳಿಯಿಂದಾಗಿ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳು ತೂಗುಯ್ನಾಲೆಯಂತೆ ಹೊಯ್ದಾಡಿದ ಘಟನೆಗಳೂ ನಡೆದಿವೆ. ಗಾಳಿಯ ವೇಗಕ್ಕೆ ಜನ ಕಂಗಾಲಾಗಿದ್ದರು.
ಇಷ್ಟು ಮಾತ್ರವಲ್ಲದೆ ಕಚೇರಿ ಯಿಂದ ಮನೆಗೆ ತೆರಳುವ ಸಂದರ್ಭ ದಲ್ಲಿಯೇ ಧಾರಾಕಾರ ಮಳೆಯಾದ ಕಾರಣ ಕಿಲೋಮೀಟರ್ ದೂರಕ್ಕೆ ಸಂಚಾರ ದಟ್ಟಣೆ ಉಂಟಾಗಿತ್ತು. ಮಳೆಯಿಂದಾಗಿ ಕಳೆದ ಹಲವು ದಿನಗಳಿಂದ 40 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ತಾಪಮಾನವು ಸೋಮವಾರ ಸಂಜೆ ವೇಳೆಗೆ 24 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.