ಉಡುಪಿ: ಚಲಿಸುತ್ತಿರುವ ರೈಲಿನಿಂದ ಜಾರಿಬಿದ್ದ ವ್ಯಕ್ತಿಯನ್ನು ರಕ್ಷಿಸಿದ ರೈಲ್ವೆ ಸಿಬ್ಬಂದಿ
ಉಡುಪಿ: ಚಲಿಸುತ್ತಿರುವ ರೈಲಿನಿಂದ ಇಳಿಯುವ ವೇಳೆ ಕಾಲು ಜಾರಿ ಬಿದ್ದು, ರೈಲಿನ ಹಿಡಿಯನ್ನು ಬಿಡಲಾಗದೇ ರೈಲಿನೊಂದಿಗೆ ಎಳೆದೊಯ್ದ ಹಿರಿಯ ವ್ಯಕ್ತಿಯನ್ನು ಅಲ್ಲಿದ್ದ ರೈಲ್ವೆ ಪೊಲೀಸ್ ಪಡೆಯ ಸಿಬ್ಬಂದಿ ರಕ್ಷಿಸಿದ ಘಟನೆ ಉಡುಪಿಯ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ವರದಿಯಾಗಿದೆ.
ಪೆರ್ಡೂರು ನಿವಾಸಿ ಕುಟ್ಟಿ ಕುಂದರ್ (70) ಅವರು ಮುಂಬಯಿಗೆ ತೆರಳುತ್ತಿದ್ದ ಮಗಳ ಬ್ಯಾಗ್‌ಗಳನ್ನು ರೈಲಿನಲ್ಲಿರಿಸಿ ಇಳಿಯುತ್ತಿದ್ದಾಗ ರೈಲು ಸಂಚರಿಸಲು ಆರಂಭಿಸಿದ್ದು, ಅವರು ಆಯತಪ್ಪಿ ಬಿದ್ದರು.
ರೈಲಿನ ಹಿಡಿಕೆಯನ್ನು ಹಿಡಿದುಕೊಂಡಿದ್ದ ಕಾರಣ ಸುಮಾರು 30 ಮೀಟರ್ ದೂರದ ವರೆಗೆ ರೈಲು ಅವರನ್ನು ಎಳೆದುಕೊಂಡು ಹೋಗಿದೆ. ಇದನ್ನು ಗಮನಿಸಿದ ಕರ್ತವ್ಯನಿರತ ಸಿಬಂದಿ ಎಂ.ವಿ. ಸಜೀರ್ ಅವರು ಧಾವಿಸಿ ಬಂದ ಕುಂದರ್ ಅವರನ್ನು ಹಿಡಿದು ಮೇಲಕ್ಕೆತ್ತಿ ಉಪಚರಿಸಿದರು. ಕುಂದರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.





