ಶಾಲಾ ಬಾಲಕಿಗೆ ಥಳಿಸಿದ ಯುವಕ: ವೀಡಿಯೊ ವೈರಲ್ ಬಳಿಕ ಆರೋಪಿಯ ಬಂಧನ
ರಾಂಚಿ: ಜಾರ್ಖಂಡ್‍ನ ದುಮ್ಕಾ ಜಿಲ್ಲೆಯಲ್ಲಿ ಶಾಲಾ ಬಾಲಕಿಯೊಬ್ಬಳಿಗೆ 16 ವರ್ಷದ ಬಾಲಕ ಕಾಲಿನಿಂದ ಒದ್ದು ಕ್ರೌರ್ಯ ಮೆರೆದಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಆರೋಪಿ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಪಾಕುರ್ ಜಿಲ್ಲೆಯ ಶಾಲೆಯೊಂದರ ಬುಡಕಟ್ಟು ವಿದ್ಯಾರ್ಥಿಯಾಗಿದ್ದು, ವೀಡಿಯೋದಲ್ಲಿ ಸಮವಸ್ತ್ರ ಧರಿಸಿ, ಕೈಯಲ್ಲಿ ಬ್ಯಾಗ್ ಹಿಡಿದುಕೊಂಡಿದ್ದ ಬಾಲಕಿಗೆ ಪದೇ, ಪದೇ ಕಾಲಿನಿಂದ ಬಾಲಕ ಒದಿರುವುದನ್ನು ಕಾಣಬಹುದಾಗಿದೆ.
ಸದ್ಯ ಈ ಘಟನೆ ವೀಡಿಯೋವನ್ನು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ದಯವಿಟ್ಟು ಈ ವಿಚಾರವಾಗಿ ತನಿಖೆ ನಡೆಸಿ ನಂತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಿ ತಿಳಿಸಿದ್ದಾರೆ.
ಕೂಡಲೇ ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರಿಗೆ ಬಾಲಕ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ದುಮ್ಕಾ ಜಿಲ್ಲೆಯ ನಿವಾಸಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಹದಿನೈದು ದಿನಗಳ ಹಿಂದೆ ಈ ಘಟನೆ ಸಂಭವಿಸಿದೆ.
ಆದರೆ ಈ ವೀಡಿಯೋ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಅಲ್ಲದೇ ಮೇಲ್ನೋಟಕ್ಕೆ ಇದೊಂದು ಪ್ರೇಮ ಪ್ರಕರಣ ಎಂದು ಕಾಣಿಸುತ್ತದೆ ಎಂದು ದುಮ್ಕಾ ಉಪವಿಭಾಗದ ಪೊಲೀಸ್ ಅಧಿಕಾರಿ (ಎಸ್‍ಡಿಪಿಒ) ನೂರ್ ಮುಸ್ತಫಾ ಅನ್ಸಾರಿ ಹೇಳಿದ್ದಾರೆ.




