ಕುಂದಾಪುರ: ಅನಾರೋಗ್ಯದಿಂದ ಮಲಗಿಕೊಂಡೇ ಓದಿ ಎಸ್ಸೆಎಸ್ಸೆಎಲ್ಸಿಯಲ್ಲಿ 580 ಅಂಕ ಪಡೆದ ವಿದ್ಯಾರ್ಥಿನಿ
ಕುಂದಾಪುರ : ತಾಲೂಕಿನ ವಿದ್ಯಾರ್ಥಿನಿಯೊಬ್ಬಳು ಶಾಲೆ ಮೆಟ್ಟಿಲನ್ನೂ ಹತ್ತಲಾರದೆ , ಮಲಗಿಕೊಂಡೇ ಓದಿ 580 ಅಂಕ ಪಡೆದು ವಿ ಸಾಧನೆ ಮಾಡಿದ್ದಾಳೆ.
ಕುಂದಾಪುರ ತಾಲೂಕಿನ ಹಕ್ಲಾಡಿ ರಾಜು ಪೂಜಾರಿ ಸುಜಾತಾ ಪೂಜಾರಿ ದಂಪತಿ ಪುತ್ರಿ ಶ್ರಾವ್ಯಾ ಕರುಳು ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಹೀಗಾಗಿ ಈಕೆಗೆ ಆರು ತಿಂಗಳು ಶಾಲೆಗೆ ಹೋಗಲು ಆಗಿರಲಿಲ್ಲ. ತರಗತಿಗೆ ಹೋಗಿ ಪಾಠವನ್ನೂ ಕೇಳಿಲ್ಲ. ಮಲಗಿದ ಸ್ಥಿತಿಯಲ್ಲೇ ಓದು ಬರಹ ಮಾಡಿ ಈಕೆ 580 ಅಂಕ ತರುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾಳೆ. ತನ್ನ ಸಮಸ್ಯೆಗಳ ನಡುವೆಯೂ ಈಕೆಯ ಈ ಸಾಧನೆ ಹ್ಯಾಟ್ಸಾಫ್ ಹೇಳಲೇಬೆಕು.
ಆರು ತಿಂಗಳು ಮಂಚದಲ್ಲಿ ಮಲಗಿದ ಸ್ಥಿತಿಯಲ್ಲಿದ್ದರೂ ಈಕೆ ಅಲರ್ಟ್ ಆಗಿದ್ದಳು. ನೋಟ್ಸ್ ಮತ್ತು ಛಾಯಾಪ್ರತಿ ತರಿಸೊಕೊಂಡು ಓದಿ ಶ್ರಾವ್ಯಾ ಈ ಸಾಧನೆ ಮಾಡಿದ್ದು ವಿಶೇಷ. ಎಲ್ಲರಂತೆ ಆಕ್ಟಿವ್ ಆಗಿದ್ದ ಶ್ರಾವ್ಯಾ ಐಬಿಡಿ ಎನ್ನುವ ಕರುಳು ಸಂಬಂಧಿ ಕಾಯಿಲೆಯಿಂದಾಗಿ ದೇಹದ ತೂಕ ಕಳೆದುಕೊಂಡು ಈಗ ಕೇವಲ 21 ಕೆ.ಜಿ.ಗೆ ಇಳಿದಿದ್ದಾಳೆ. ಈಕೆ ಆತ್ರಾಡಿಯ ಮಕ್ಕಳ ಕೂಟ ಶಾಲೆಗೆ ದಾಖಲಾಗಿ ಎಸ್ಸೆಸ್ಸೆಲ್ಸಿ ಪೂರೈಸಿದ್ದು, ಮಕ್ಕಳ ಕೂಟ ಶಾಲಾ ಸಂಚಾಲಕ ಸುಭಾರ್ ಶೆಟ್ಟಿ ಹಾಗೂ ದೀಪಿಕಾ ಶೆಟ್ಟಿ ಅನಾರೋಗ್ಯದ ನಡುವೆಯೂ ಶ್ರಾವ್ಯಾಳ ಓದಿನ ತುಡಿತ ಕಂಡು ನೋಟ್ಸ್ ಹಾಗೂ ಆನ್‌ಲೈನ್ ಪಾಠದ ಛಾಯಾಪ್ರತಿ ನೀಡಿ ಸಹಕರಿಸಿದ್ದರು. ಶಾವ್ಯಾಳ ತಂದೆ ತಾಯಿ ಹೆಮ್ಮಾಡಿಯಲ್ಲಿ ಚಿಕ್ಕ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದಾರೆ.
ಶ್ರಾವ್ಯಾಳ ದೈಹಿಕ ಶಕ್ತಿ ಕುಂದಿದ್ದರೂ, ಓದುವ ಆಸಕ್ತಿ ಬತ್ತಿಲ್ಲ. ಪಿಯುಸಿಯಲ್ಲಿ ಪಿಸಿಎಂಬಿ ಆಯ್ಕೆ ಮಾಡಿ ಸ್ವಾವಲಂಬಿ ಜೀವನ ಸಾಗಿಸಬೇಕೆಂಬ ಕನಸು ಕಟ್ಟಿಕೊಂಡಿದ್ದಾಳೆ, ಸದ್ಯ ಪಕೃತಿ ಚಿಕಿತ್ಸಾ ಕೇಂದ್ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.





