March 25, 2026

ಬ್ರಿಗೇಡ್ ರಸ್ತೆಯ ಶಾಪಿಂಗ್ ಕಾಂಪ್ಲೆಕ್ಸ್ ನ ನಾಲ್ಕನೇ ಮಹಡಿಯಿಂದ ಬಿದ್ದ ಪ್ರೇಮಿಗಳು: ಯುವತಿ ದುರಂತ ಸಾವು

0
image_editor_output_image-1649927519-1653153412737

ಬೆಂಗಳೂರು: ಅಲ್ಲಿನ ಕಟ್ಟಡದ ಎಡವಟ್ಟು ಕಾರಣವೋ, ಯುವಕ- ಯುವತಿ ಕಟ್ಟಡದ ಮೂಲೆಯಲ್ಲಿ ತಳ್ಳಾಡಿದ್ದು ಕಾರಣವೋ ಗೊತ್ತಿಲ್ಲ. ಬೆಂಗಳೂರಿನಲ್ಲಿ ಅತ್ಯಂತ ಹೃದಯ ವಿದ್ರಾವಕ ಘಟನೆ ನಡೆದಿದ್ದು ಬ್ರಿಗೇಡ್ ರಸ್ತೆಯ ಶಾಪಿಂಗ್ ಕಾಂಪ್ಲೆಕ್ಸ್ ಬಂದಿದ್ದ ಯುವ ಪ್ರೇಮಿಗಳಿಬ್ಬರು ಕಟ್ಟಡದ ನಾಲ್ಕನೇ ಮಹಡಿಯ ಮೂಲೆಯಿಂದ ಕೆಳಕ್ಕೆ ಬಿದ್ದು ಯುವತಿ ದುರಂತ ಸಾವು ಕಂಡಿದ್ದಾಳೆ.

ಮೆಟ್ಟಿಲು ಹತ್ತಿ ಹೋಗುವ ಮೂಲೆಯಲ್ಲಿ ಗ್ಲಾಸ್ ಮುಚ್ಚಿರುವ ಜಾಗದಿಂದ ಯುವಕ- ಯುವತಿ ಹೊರಕ್ಕೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಮೃತ ಯುವತಿಯನ್ನು ಫ್ರೇಸರ್ ಟೌನ್ ನಿವಾಸಿ ಲಿಯಾ(20) ಎಂದು ಗುರುತಿಸಲಾಗಿದೆ. ಯುವಕನನ್ನು ಮೂಲತಃ ಆಂಧ್ರಪ್ರದೇಶದ ಕ್ರಿಸ್ ಪೀಟರ್ (18) ಎಂದು ಗುರುತಿಸಿದ್ದು ಆಸ್ಪತ್ರೆಗೆ ದಾಖಲಾಗಿದ್ದು ಅಪಾಯದಿಂದ ಪಾರಾಗಿದ್ದಾನೆ. ಯುವತಿ ನೆಲಕ್ಕೆ ಬೀಳುತ್ತಲೇ ತಲೆಯ ಭಾಗ ಒಡೆದು ಹೋಗಿದ್ದು, ಗಂಭೀರ ಸ್ಥಿತಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆಗೆ ಒಯ್ಯಲಾಗಿತ್ತು. ಅಷ್ಟರಲ್ಲೇ ಆಕೆ ಸಾವು ಕಂಡಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹುಡುಗ ಬೆಂಗಳೂರಿನ ಎಚ್‌ಎಎಲ್‌ ನಿವಾಸಿಯಾಗಿದ್ದು, ಇಬ್ಬರೂ ಸೆಂಟ್‌ ಜೋಸೆಫ್‌ ಕಾಮರ್ಸ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಲಿಯಾ ಮತ್ತು ಕ್ರಿಸ್‌ ಪೀಟರ್‌ ಇಬ್ಬರೂ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದವರು. ಇಂದು ಮದ್ಯಾಹ್ನ ಊಟಕ್ಕೆಂದು ಬ್ರಿಗೇಡ್‌ ರಸ್ತೆಯ ಶಾಪಿಂಗ್‌ ಕಾಂಪ್ಲೆಕ್ಸ್‌ ಒಂದಕ್ಕೆ ಬಂದಿದ್ದಾರೆ. ಅಲ್ಲಿ ಊಟ ಮುಗಿಸಿ, ವಾಶ್‌ರೂಂಗೆ ತೆರಳಿ ಕೆಳಕ್ಕೆ ಇಳಿಯುವಾಗ ಏನೋ ಮಾತನಾಡಲೆಂದು ಮೂಲೆಯಲ್ಲಿ ನಿಂತಿದ್ದು ಈ ವೇಳೆ ಯುವತಿ ಆಯತಪ್ಪಿದ್ದು ಆಕೆಯನ್ನು ಹಿಡಿಯಲು ಹೋದ ಹುಡುಗ ಇಬ್ಬರೂ ಹೊರಕ್ಕೆ ಜಾರಿದ್ದಾರೆ. ಈ ವೇಳೆ, ಹುಡುಗಿ ನೇರವಾಗಿ ನೆಲಕ್ಕೆ ಅಪ್ಪಳಿಸಿದರೆ, ಯುವಕ ಆಕೆಯ ಮೇಲೆ ಬಿದ್ದಿದ್ದಾನೆ ಎನ್ನಲಾಗಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ ಯುವತಿ ಮೊದಲು ಜಾರಿದ್ದಾಳೆ, ಅವಳನ್ನು ಹಿಡಿಯಲು ಹೋದ ಹುಡುಗ ಕೂಡ ಅವಳ ಜತೆಗೇ ಕೆಳಕ್ಕೆ ಬಿದ್ದಿದ್ದಾನೆ. ಕೆಳಗೆ ಬೀಳುವಾಗ ಯುವತಿಯ ಮೇಲೆ ಯುವಕ ಬಿದ್ದ ಕಾರಣ ಆತ ಜೀವಂತ ಉಳಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!