ಶಾಲೆ ಆರಂಭ, ದಕ್ಷಿಣ ಕನ್ನಡದ ಕೆಲ ಶಾಲೆಗಳಲ್ಲಿ ‘ಗಣಹೋಮ’: ಶಿಕ್ಷಣ ಇಲಾಖೆಯ ಸುತ್ತೋಲೆ ಉಲ್ಲಂಘನೆ
ಮಂಗಳೂರು: ಮೇ 16ರ ಸೋಮವಾರದಿಂದ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳು ಪ್ರಾರಂಭಗೊಂಡಿದೆ. ಶಿಕ್ಷಕರು ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಆದರೆ, ಈ ಮಧ್ಯೆ ದಕ್ಷಿಣ ಕನ್ನಡದ ಕೆಲವೆಡೆ ಶಾಲೆಗಳಲ್ಲಿ ‘ಗಣಹೋಮ’ ನಡೆಸುವ ಮೂಲಕ ಶಾಲೆ ಪ್ರಾರಂಭ ಮಾಡಿದ್ದು, ಕಾರ್ಯಕ್ರಮದ ಫೋಟೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಶಿಕ್ಷಣ ಇಲಾಖೆಯ ಸುತ್ತೋಲೆ ಉಲ್ಲಂಘನೆ ಮಾಡಿದೆ.
ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ದಕ್ಷಿಣ ಕನ್ನಡದಲ್ಲಿ ಸೃಷ್ಟಿಯಾದ ಹಿಜಾಬ್ ಸಂಬಂಧಿ ವಿವಾದ ಇಡೀ ರಾಜ್ಯವನ್ನು ಆವರಿಸಿಕೊಂಡು ಜಗತ್ತಿನ ಗಮನವನ್ನೇ ಸೆಳೆದಿತ್ತು.
ಧಾರ್ಮಿಕ ಸಂಕೇತವಾದ ಹಿಜಾಬ್ ತೊಡುವುದರ ವಿರುದ್ಧ ಬಿಜೆಪಿ ಪರ ಸಂಘಟನೆಗಳು ವಿರೋಧಿಸಿದ್ದವು. ಹೈಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರಣಕ್ಕೆ ಸಂಬಂಧಿಸಿ ಮಾರ್ಚ್ 15ರಂದು ಹೈಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ನೀಡಿತ್ತು. ಈ ವೇಳೆ, ‘ಧಾರ್ಮಿಕ ಸಂಕೇತ ಸೂಚಿಸುವ ಉಡುಪು ಧರಿಸುವುದನ್ನು ಕೈಬಿಡುವಂತೆ’ ಆದೇಶಿಸಿತ್ತು.




