ನಿಂತಿದ್ದ ಲಾರಿಗೆ ಕಾರು ಢಿಕ್ಕಿ: ಯುವತಿ ಸ್ಥಳದಲ್ಲಿಯೇ ಸಾವು, ಕುಟುಂಬದ ಐವರು ಸದಸ್ಯರಿಗೆ ಗಾಯ
ಬೆಂಗಳೂರು: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 24 ವರ್ಷದ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆಕೆಯ ಐವರು ಕುಟುಂಬ ಸದಸ್ಯರು ಗಾಯಗೊಂಡಿರುವ ಘಟನೆ ನೈಸ್ ರಸ್ತೆಯಲ್ಲಿ ನಡೆದಿದೆ. ಶನಿವಾರ ರಾತ್ರಿ ಮಾಗಡಿ ಟೋಲ್ ಬಳಿ ಈ ದುರ್ಘಟನೆ ನಡೆದಿದ್ದು,ನಿರ್ಲಕ್ಷ್ಯ ಆರೋಪದ ಮೇರೆಗೆ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಗೃಹಿಣಿ ಸುಲೋಚನಾ ಮೃತಪಟ್ಟ ಮಹಿಳೆಯಾಗಿದ್ದು, ಆಕೆಯ ಪತಿ ಮುರಳಿ (32) ಮಕ್ಕಳಾದ ಮೋಕ್ಷಿತ್ (4) ಪವನ್ ಕಲ್ಯಾಣ್ (7) ಅತ್ತೆ ಅಂಬಿಕಾ (58) ಮತ್ತು ಸಂಬಂಧಿ ವಿನುತಾ (22) ಎಂಬವರು ಗಾಯಗೊಂಡಿದ್ದಾರೆ. ಧರ್ಮಸ್ಥಳದ ದೇವಾಲಯಕ್ಕೆ ತನ್ನ ಕುಟುಂಬವನ್ನು ಕರೆದುಕೊಂಡು ಹೋಗಿದ್ದ ಮುರಳಿ, ಸ್ವಗ್ರಾಮ ಅನೇಕಲ್ ಗೆ ಹಿಂತಿರುವಾಗ ಈ ದುರ್ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.





