ಎಸೆಸೆಲ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್: ಹಲವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು
ಮುದ್ದೇಬಿಹಾಳ: ರಾಜ್ಯದ ಮುದ್ದೇಬಿಹಾಳದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಆಗಿ ವೈರಲ್ ಆದ ಹಿನ್ನೆಲೆ, ತಾಲೂಕಿನ ಢವಳಗಿಯ ಹಲವರ ತಲೆದಂಡವಾಗಿದ್ದು, ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.
ಕಳೆದ ಬುಧವಾರ ನಡೆದಿದ್ದ 10ನೇ ತರಗತಿ ಸಮಾಜ ವಿಜ್ಞಾನ ಪರೀಕ್ಷೆಯ ಪ್ರಶ್ನೆ ಪತ್ರಿಕೆ, ಪರೀಕ್ಷೆ ಆರಂಭಗೊಂಡ ಒಂದು ಗಂಟೆಯಲ್ಲೇ ರಾಯಚೂರು ಜಿಲ್ಲೆ ಮುದಗಲ್ಲಿನಲ್ಲಿ ಬಹಿರಂಗಗೊಂಡು ಶಿಕ್ಷಣ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಘಟನೆಗೆ ಕಾರಣರಾದ ಹಲವರ ವಿರುದ್ಧ ಕ್ರಮ ಕೈಗೊಂಡಿದ್ದು, ಎಫ್‌ಐಆರ್ ಸಹ ಹಾಕಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಸಹಕರಿಸಿರುವ ರೂಢಗಿ ಗ್ರಾಮದ ಸರ್ಕಾರಿ ಆರ್‌ಎಂಎಸ್‌ಎ ಪ್ರೌಢಶಾಲೆಯ ವಿದ್ಯಾರ್ಥಿ ಬಸವರಾಜ ಕುಂದರಗಿಯನ್ನು ಪರೀಕ್ಷೆಯಿಂದ ಡಿಬಾರ್ ಮಾಡಲಾಗಿದೆ.
ಅವನ ಪ್ರಶ್ನೆ ಪತ್ರಿಕೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡ ವ್ಯಕ್ತಿಯ ವಿರುದ್ಧ ಮುದ್ದೆಬಿಹಾಳ ಪೊಲೀಸ್ ಠಾಣೆಯಲ್ಲಿ ಶಿಕ್ಷಣ ಕಾಯ್ದೆ 1983 ಮತ್ತು 2017 ರ ತಿದ್ದುಪಡಿ ಕಾಯ್ದೆ ಅನ್ವಯ ಬಿಇಒ ಎಚ್.ಜಿ.ಮಿರ್ಜಿ ರವರು ಎಫ್‌ಐಆರ್ ದಾಖಲಿಸಿದ್ದಾರೆ.




