December 15, 2025

ಸುಳ್ಯ: ನಗರ ಪಂಚಾಯತ್ ಬಜೆಟ್ ಸಭೆಯಲ್ಲಿ ಕಾಶ್ಮೀರ್ ಫೈಲ್ಸ್ ,ಹಿಜಾಬ್ ನ ಚರ್ಚೆ: ಆಡಳಿತ – ವಿಪಕ್ಷ ವಾಕ್ಸಮರ

0
IMG-20220331-WA0001.jpg

ಸುಳ್ಯ: ನಗರ ಪಂಚಾಯತ್ ಬಜೆಟ್ ಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಕಾಶ್ಮೀರ ಫೈಲ್ಸ್, ಹಾಗೂ ಹಿಜಾಬ್ ವಿಷಯದ ಕುರಿತು ಚರ್ಚೆಗಳು ನಡೆದು ಕೆಲಕಾಲ ವಾಕ್ಸಮರ ನಡೆದ ಘಟನೆ ವರದಿಯಾಗಿದೆ.

ವಿಪಕ್ಷದವರು ಸಭೆಯಲ್ಲಿ ಕಾಶ್ಮೀರ್ ಫೈಲ್ಸ್ ಪ್ರಸ್ತಾಪಿಸಿ ಆಡಳಿತವನ್ನು ಕುಟುಕಿದರೆ, ಅದಕ್ಕೆ ಪ್ರತಿಯಾಗಿ ಆಡಳಿತದವರು ಹಿಜಾಬ್ ಪ್ರಕರಣವನ್ನು ‌ಸಭೆಯಲ್ಲಿ ಅಸ್ತ್ರವನ್ನಾಗಿಸಿ ಕೊಂಡರು.

ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ಮಾರ್ಚ್ 29 ರಂದು ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ರವರಿಂದ ಬಜೆಟ್ ಮಂಡನೆ ಯಾದ ಬಳಿಕ ಬಜೆಟ್ ಮೇಲಿನ ಚರ್ಚೆಗೆ ಅಧ್ಯಕ್ಷರು ಅವಕಾಶ ನೀಡಿದಾಗ ಕಾಂಗ್ರೆಸ್ ಪಕ್ಷದ ಸದಸ್ಯ ವೆಂಕಪ್ಪ ಗೌಡರು ಮಾತನಾಡಿ ಬಜೆಟ್ 16 ಕೋಟಿ ಇದ್ದರೂ ಬಜೆಟ್ ಗಾತ್ರ ನೋಡಿದರೆ ಕನಿಷ್ಠ ಒಂದು ವಾರ್ಡ್ ಗೆ 75 ಲಕ್ಷ ಸಿಗುವಂತೆ ಕಾಣುತ್ತದೆ. ಆದರೆ ಅನುದಾನ ಇದೆಯಾ? ಎಂದು ಪ್ರಶ್ನಿಸಿ ಪಂಚಾಯತ್ ನಿಂದ ಹಿಡಿದು, ಸಿ.ಎಂ., ಪಿ.ಎಂ.ನವರೆಗೆ ನಿಮ್ಮವರೇ ಇದ್ದಾರೆ. ಅನುದಾನ ತರಿಸಿ ನಗರವನ್ನು ಅಭಿವೃದ್ಧಿಪಡಿಸಿ ಅದು ಬಿಟ್ಟು ಕಾಶ್ಮೀರ್ ಫೈಲ್ಸ್ ತಂದು ಜನರಲ್ಲಿ ರಕ್ತಪಾತದ ಭಾವನೆ ತುಂಬಬೇಡಿ ಎಂದಿದ್ದಾರೆ.

ಅಭಿವೃದ್ಧಿ ಫೈಲ್ಸ್ ತಂದು ಅಭಿವೃದ್ಧಿಗೆ ಆದ್ಯತೆ ಕೊಡಿ ಎಂದು ಹೇಳಿ ಮಾತು ಮುಂದುವರಿಸಿ, ಸುಳ್ಯದಲ್ಲಿ ಇತ್ತೀಚಿಗೆ ನಡೆದ ಧಾರ್ಮಿಕ ಕೇಂದ್ರದ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ರನ್ನು ಕರೆಸಿ ರಾಜಕಾರಣದ ಮಾತನಾಡಿಸಿದ್ದೀರಿ ಇದು ಸರಿಯಲ್ಲ.
ಧಾರ್ಮಿಕ ಕೇಂದ್ರದಲ್ಲಿ ರಾಜಕೀಯ ತರಬೇಡಿ” ಎಂದು ಹೇಳಿದರು.
ಈ ವೇಳೆ ಆಡಳಿತ ಸದಸ್ಯ ಬಿಜೆಪಿ ಪಕ್ಷದ ಬೂಡು ರಾಧಾಕೃಷ್ಣ ರೈಯವರು ಎದ್ದು ನಿಂತು, ಇದು ಬಜೆಟ್ ಸಭೆ. ಇಲ್ಲಿ ಕಾಶ್ಮೀರ್ ಫೈಲ್ಸ್ ವಿಚಾರ, ಕಲ್ಲಡ್ಕ ಪ್ರಭಾಕರ ಭಟ್ ರ ವಿಚಾರ ಬೇಡ. ಅಭಿವೃದ್ಧಿ ಕುರಿತು ಮಾತನಾಡಿ. ಕಾಶ್ಮೀರ್ ಫೈಲ್ಸ್ ಬೇಕಾದವರು ನೋಡುತ್ತಾರೆ. ನಿಮ್ಮ ಕಾಂಗ್ರೆಸ್ ನಾಯಕರು ಏನೆಲ್ಲ ಮಾತನಾಡಿದ್ದಾರೆಂದು ಗೊತ್ತಿದೆಯಾ?” ಎಂದು ಪ್ರಶ್ನಿಸಿದರು. ಆಡಳಿತ ಸದಸ್ಯರಾದ ಸುಧಾಕರ ಕುರುಂಜಿಭಾಗ್, ದುಗಲಡ್ಕ ಬಾಲಕೃಷ್ಣ ‌ರೈ ಧ್ವನಿಗೂಡಿಸಿದರು.

ವೆಂಕಪ್ಪ ಗೌಡರು ಕಾಶ್ಮೀರ್ ಫೈಲ್ಸ್ ವಿಚಾರದಲ್ಲಿ ಮತ್ತೆ ಮಾತನಾಡಿದಾಗ, ಅಧ್ಯಕ್ಷ ವಿನಯ ಕಂದಡ್ಕ ಉತ್ತರಿಸಿ “ಹಿಜಾಬ್ ಪ್ರಕರಣ ಕುರಿತು ಹೈಕೋರ್ಟ್ ತೀರ್ಪು ನೀಡಿದಾಗ, ಅದನ್ನು ವಿರೋಧಿಸಿ ಒಂದು ಸಮುದಾಯದವರು ಬಂದ್‌ ಮಾಡಿದರಲ್ಲ ಆಗ ಯಾಕೆ ನೀವು ಪ್ರಶ್ನಿಸಲಿಲ್ಲ” ಎಂದು ಹೇಳಿದಾಗ ಕಾಂಗ್ರೆಸ್ ಪಕ್ಷದ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಎದ್ದು ನಿಂತು ಅಧ್ಯಕ್ಷ ರೇ ಅದನ್ನು ಇಲ್ಲಿ ಪ್ರಸ್ತಾಪ ಮಾಡುವುದು ಬೇಡ. ನಾವು ಬಂದ್ ಮಾಡಿ ಹೈಕೋರ್ಟ್ ತೀರ್ಪನ್ನು ವಿರೋಧಿಸಿದ್ದಲ್ಲ. ನಮ್ಮ ನೋವನ್ನು ತೋರ್ಪಡಿಸಿದ್ದೇವೆ. ಈ ಹಿಂದೆ ಶಬರಿಮಲೆ ಕುರಿತು ನ್ಯಾಯಾಲಯ ತೀರ್ಪು ನೀಡಿದಾಗ ಕೇರಳದಲ್ಲಿ ನಿಮ್ಮ ಪಕ್ಷದವರು ಏನೆಲ್ಲಾ ಮಾಡಿದ್ದೀರಿ ನೆನಪಿಲ್ಲವೇ” ಎಂದು‌ ಹೇಳಿದರೆ, ಇವರಿಗೆ ಸಾಥ್ ನೀಡಿದ ಪಕ್ಷೇತರ ಅಭ್ಯರ್ಥಿ ಸದಸ್ಯ ಕೆ.ಎಸ್.ಉಮ್ಮರ್ “ಹೈಕೋರ್ಟ್ ತೀರ್ಪು ನೀಡಿದಾಗ ನಮ್ಮ ನೋವನ್ನು ನಾವು ತೋರ್ಪಡಿಸಿದ್ದು ಹೌದು.‌ ಶಬರಿಮಲೆ ತೀರ್ಪು ಬಂದಾಗ ಅದನ್ನು ವಿರೋಧಿಸಿದವರು ಅಂದು ಒಂದು ವರ್ಷ ಕೇರಳದಲ್ಲಿ ಏನೆಲ್ಲಾ ಅನಾಚಾರ ಮಾಡಿದ್ದಾರೆ” ಎಂದು ಪ್ರಶ್ನಿಸಿದರು.

“ಆ ಸಂದರ್ಭದಲ್ಲಿ ಬಿಜೆಪಿಯವರು ಮಾಡಿದ್ದಲ್ಲ. ಕಾಂಗ್ರೆಸ್ ನವರೂ ಮಾಡಿದ್ದಾರೆ” ಎಂದು ಅಧ್ಯಕ್ಷರು ಹೇಳಿದರು.

ರಾಜ್ಯದಲ್ಲಿ ಒಂದು ಸಮುದಾಯ ಬಂದ್ ಕರೆ ಕೊಟ್ಟಾಗ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಬಸ್ ಗೂ ಕಲ್ಲು ಹೊಡೆದಿಲ್ಲ. ಆದರೆ ಬಿಜೆಪಿ ಇನ್ನಿತರ ಪಕ್ಷಗಳು ಬಂದ್ ಕರೆ ಕೊಟ್ಟಾಗ ಎಷ್ಟೆಲ್ಲ ತೊಂದರೆ ಆಗಿದೆ ಇತಿಹಾಸ ತೆಗೆದು‌ ನೋಡಿ ಎಂದು ಉಮ್ಮರ್ ಹೇಳಿದಾಗ, ಇತಿಹಾಸ ತೆಗೆಯಿರಿ. ಮೊಘಲ್ ರಿಂದ, ಬಾಬರನಿಂದ ಹಿಡಿದು ಎಲ್ಲವೂ ತೆಗೆಯಿರಿ ಎಂದು ಅಧ್ಯಕ್ಷರು ಹೇಳಿದಾಗ ಆಡಳಿತ – ವಿಪಕ್ಷ ಸದಸ್ಯರ ಮಧ್ಯೆ ವಾಕ್ಸಮರ ನಡೆಯಿತು.

ಕೆಲ ಹೊತ್ತು ಈ ಚರ್ಚೆ ನಡೆದಾಗ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ‌ ಮಧ್ಯೆ ಪ್ರವೇಶಿಸಿ ಸಮಾಧಾನಪಡಿಸಿ ಬಳಿಕ ಚರ್ಚೆ ನಿಂತ ಪ್ರಸಂಗ ನಡೆದಿದೆ.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಾಧ್ಯಕ್ಷೆ ಸರೋಜಿನಿ ಪೆಲತ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಕುರುಂಜಿ, ನಗರ ಪಂಚಾಯತ್ ಮುಖ್ಯ ಅಧಿಕಾರಿ ಎಂ ಆರ್ ಸ್ವಾಮಿ ಸಭೆಯಲ್ಲಿ ಆಡಳಿತ ಪಕ್ಷದ ಮತ್ತು ವಿರೋಧ ಪಕ್ಷದ ಬಹುತೇಕ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!