November 13, 2024

ನಾಳೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆ: ಪರೀಕ್ಷೆ ಬರೆಯಲಿರುವ 8,73,846 ವಿದ್ಯಾರ್ಥಿಗಳು

0

ಬೆಂಗಳೂರು: ನಾಳೆ ಮಾರ್ಚ್ 28ರಿಂದ ಎಪ್ರಿಲ್ 11ರವರೆಗೆ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದೆ. ಈ ಬಾರಿ ರಾಜ್ಯದ 15,387 ಶಾಲೆಗಳ 8,73,846 ವಿದ್ಯಾರ್ಥಿಗಳು ಎಸ್​ಎಸ್​​ಎಲ್​ಸಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಬರೆಯಲು 45,289 ಪರೀಕ್ಷಾ ಕೊಠಡಿಗಳ ಸಿದ್ಧತೆ ಮಾಡಲಾಗಿದೆ. 3,444 ಮುಖ್ಯ ಅಧೀಕ್ಷಕರ ನೇತೃತ್ವದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಯಲಿದ್ದು, 49,817 ಕೊಠಡಿ ಮೇಲ್ವಿಚಾರಕರು ಭಾಗಿಯಾಗಲಿದ್ದಾರೆ.

ರಾಜ್ಯದಲ್ಲಿ ಒಟ್ಟು 8,73,846 ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆ ಬರೆಯಲಿದ್ದು, ಈ ಪೈಕಿ 4,52,732 ಗಂಡು ಮಕ್ಕಳು ಹಾಗೂ 4,21,110 ಹೆಣ್ಣು ಮಕ್ಕಳಿದ್ದಾರೆ. 04 ಜನ ತೃತೀಯ ಲಿಂಗಿಗಳು ಈ ಬಾರಿ ಪರೀಕ್ಷೆ ಎದುರಿಸುತ್ತಿದ್ದಾರೆ.

ಸಮವಸ್ತ್ರ ಕಡ್ಡಾಯ

ದಿನಾಂಕ 28-03-2022 ರಿಂದ ದಿನಾಂಕ 11-04-2022ರವರೆಗೆ ನಡೆಯಲಿರುವಂತ ಎಸ್ಎಸ್ಎಲ್‌ಸಿ ಮುಖ್ಯ ಪರೀಕ್ಷೆಗೆ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿ ಬರುವುದು ಕಡ್ಡಾಯವಾಗಿದೆ. ಒಂದು ವೇಳೆ ವಸ್ತ್ರ ಸಂಹಿತೆಯನ್ನು ಪಾಲಿಸದೇ ಇದ್ದರೇ ಪರೀಕ್ಷೆಗೆ ನೋ ಎಂಟ್ರಿ ಎಂಬುದಾಗಿ ಶಿಕ್ಷಣ ಇಲಾಖೆ ಖಡಕ್ ಆದೇಶದಲ್ಲಿ ತಿಳಿಸಿದೆ.

ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯು ದಿನಾಂಕ 28-03-2022ರಿಂದ ದಿನಾಂಕ 11-04-2022ರವರೆಗೆ ನಡೆಸಲು ಈಗಾಗಲೇ ತೀರ್ಮಾನಿಸಲಾಗಿದೆ. ಈಗಾಗಲೇ ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವಸ್ತ್ರ ಸಂಹಿತೆ ಕುರಿತು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಶಾಲಾ ಸಮವಸ್ತ್ರವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಧರಿಸತಕ್ಕದ್ದು ಹಾಗೂ ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸುವ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸತಕ್ಕದ್ದು ಎಂದು ಆದೇಶಿಸಲಾಗಿದೆ.

ವಿದ್ಯಾರ್ಥಿಗಳ ಉಚಿತ ಪ್ರಯಾಣಕ್ಕೆ ಕೆಎಸ್‌ಆರ್‌ಟಿಸಿ ಅವಕಾಶ

ಪ್ರಸಕ್ತ ಸಾಲಿನಲ್ಲಿ ಮಾರ್ಚ 28 ರಿಂದ ಎಪ್ರಿಲ್ 11ವರೆಗೆ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಯಲಿದೆ. ಈ ದಿನಾಂಕದಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯೋದಕ್ಕೆ ತೆರಳಲು, ಪರೀಕ್ಷೆ ಬರೆದು ಮನೆಗೆ ವಾಪಾಸ್ ಆಗೋದಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ನೀಡಿದೆ.

ಪೋಷಕರ ಫೋನ್ ಗೆ ಬರಲಿದೆ ಪರೀಕ್ಷಾ ಕೊಠಡಿಯ ಮಾಹಿತಿ!

ಎಸ್ ಎಸ್ಎಲ್ ಸಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಕೊಠಡಿಯ ಮಾಹಿತಿಯನ್ನು ಮುಂಚಿತವಾಗಿಇ ಎಸ್ಎಂಎಸ್ ಮೂಲಕ ತಿಳಿಸಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಗುಂಪುಗೂಡುವುದನ್ನು ತಡೆಯುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡುವ ಸಲುವಾಗಿ ಮುಂಚಿತವಾಗಿ ವಿದ್ಯಾರ್ಥಿಗಳ ಪಾಲಕರ ಮೊಬೈಲ್ ಫೋನ್ ಗಳಿಗೆ ಎಸ್ಎಂಎಸ್ ಅಥವಾ ವಾಟ್ಸ್ಆ್ಯಪ್ ಮೂಲಕ ಕೊಠಡಿಯ ಮಾಹಿತಿ ರವಾನೆಯಾಗಲಿದೆ.

Leave a Reply

Your email address will not be published. Required fields are marked *

error: Content is protected !!