4ನೇ ದಿನವೂ ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಹೆಚ್ಚಳ
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರವು ಶುಕ್ರವಾರ 80 ಪೈಸೆಯಷ್ಟು ಏರಿಕೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಮೂರನೇ ಬಾರಿಗೆ ದರ ಏರಿಕೆಯಾಗಿದೆ. ಈ ಹಿಂದೆ ಮಂಗಳವಾರ, ಬುಧವಾರ ದರ ಏರಿಸಲಾಗಿತ್ತು. ಐದು ರಾಜ್ಯಗಳ ಚುನಾವಣೆಗೂ ಮುನ್ನ ತೈಲ ಕಂಪನಿಗಳು ದರ ಹೆಚ್ಚಳವನ್ನು ತಡೆ ಹಿಡಿಯುವ ಮೂಲಕ ಆಗಿದ್ದ ನಷ್ಟವನ್ನು ಈಗ ಸರಿದೂಗಿಸಿಕೊಳ್ಳಲು ಮುಂದಾಗಿವೆ.
ದೆಹಲಿಯಲ್ಲಿ ಈಗ ಪ್ರತಿ ಲೀಟರ್ ಪೆಟ್ರೋಲ್ ದರ ₹97.81 ಮತ್ತು ಡೀಸೆಲ್ ದರ ₹89.07 ತಲುಪಿದೆ. ಸುಮಾರು ನಾಲ್ಕೂವರೆ ತಿಂಗಳ ಅಂತರದ ಬಳಿಕ ಮಾರ್ಚ್ 22ರಿಂದ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಲಾಗುತ್ತಿದೆ. ನಾಲ್ಕು ದಿನಗಳಲ್ಲಿ ತೈಲ ದರ ಪ್ರತಿ ಲೀಟರ್‌ಗೆ ಒಟ್ಟು ₹2.40ರಷ್ಟು ಹೆಚ್ಚಳ ಕಂಡಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ ಲೀಟರ್‌ಗೆ 85 ಮತ್ತು 79 ಪೈಸೆ ಏರಿಕೆಯಾಗಿದೆ. ಅದರಂತೆ, ಪೆಟ್ರೋಲ್ ದರ ಲೀಟರಿಗೆ ₹103.11 ಮತ್ತು ಡೀಸೆಲ್ ದರ ಲೀಟರಿಗೆ ₹87.37 ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಗೆ ಅನುಗುಣವಾಗಿ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ನಿಗದಿ ಮಾಡುವ ವ್ಯವಸ್ಥೆಯು 2017ರ ಜೂನ್‌ನಲ್ಲಿ ಜಾರಿಗೆ ಬಂತು.
ಆದರೆ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ 2021ರ ನವೆಂಬರ್ 4ರಿಂದ ತೈಲ ದರ ಏರಿಕೆಯನ್ನು ತಡೆಯಲಾಗಿತ್ತು. 137 ದಿನಗಳಲ್ಲಿ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ 30 ಡಾಲರ್‌ಗಳಷ್ಟು ಏರಿಕೆಯಾಗಿದೆ.




