ಬೈಂದೂರು: ಮಹಿಳಾ ವೈದ್ಯೆಗೆ ಅವಮಾನ: ಶಾಸಕ ಮತ್ತು ಇತರರ ವಿರುದ್ಧ ಪ್ರಕರಣ ದಾಖಲು
ಉಡುಪಿ: ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಂತ ವೈದ್ಯೆಯಾಗಿರುವ ಡಾ.ವೀಣಾ ನಾರಾಯಣ ಶಿರೂರು ಅವರನ್ನು ಅಂಕೋಲಾದ ಆಸ್ಪತ್ರೆಗೆ ಅನವಶ್ಯಕವಾಗಿ ವರ್ಗಾವಣೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹಾಗೂ ಇತರ 12 ಮಂದಿ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ದಾಖಲಾದ ದೂರಿನ ಪ್ರಕಾರ, ಶಾಸಕ ಸುಕುಮಾರ್ ಶೆಟ್ಟಿ ಅವರು ಡಾಕ್ಟರ್ ವತ್ಸಲಾ ಗೋಣಿ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಸರ್ಕಾರಿ ಆಸ್ಪತ್ರೆಯಿಂದ ಬೈಂದೂರಿಗೆ ಹಾಗೂ ಡಾ. ವೀಣಾ ಅವರನ್ನು ಅಂಕೋಲಾಗೆ ವರ್ಗಾಯಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.
ವೀಣಾ ಅವರನ್ನು ಅಂಕೋಲಾಕ್ಕೆ ವರ್ಗಾವಣೆ ಮಾಡುವಂತೆ ಶಾಸಕರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಬೈಂದೂರಿನ ಪಶು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಡಾ.ವತ್ಸಲಾ ಅವರ ಪತಿ ನಾಗರಾಜ್ ಖಾರ್ವಿ ಅವರ ಸೂಚನೆ ಮೇರೆಗೆ ಈ ಕೃತ್ಯ ಎಸಗಲಾಗಿದೆ.
ನಾಗರಾಜ್ ಅವರು ತಮ್ಮ ಪತ್ನಿ ಡಾ.ವತ್ಸಲಾ ಅವರನ್ನು ಬೈಂದೂರಿಗೆ ವರ್ಗಾವಣೆ ಮಾಡಿಕೊಡುವಂತೆ ಶಾಸಕರ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಇದಕ್ಕಾಗಿ ನಾಗರಾಜ್ ಅವರು ಬೈಂದೂರಿನ ಇತರ 10 ಸ್ಥಳೀಯರ ಸಹಾಯವನ್ನೂ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಶಾಸಕರು ಡಾ. ವೀಣಾ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಅವರನ್ನು ವರ್ಗಾವಣೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದರ ಹೊರತಾಗಿಯೂ, ಶಾಸಕರ ಒತ್ತಡಕ್ಕೆ ಮಣಿದ ಆರೋಗ್ಯ ಇಲಾಖೆಯ ಅಧೀನ ಕಾರ್ಯದರ್ಶಿ 2020, ಆಗಸ್ಟ್ 31 ರಂದು ಡಾ. ವೀಣಾ ಅವರನ್ನು ಡಾ.ವತ್ಸಲಾ ಅವರ ಸ್ಥಳಕ್ಕೆ ವರ್ಗಾವಾಣೆ ಮಾಡಿದ್ದಾರೆ. ಬಳಿಕ ಡಾ. ವೀಣಾ ಅವರು ಶಾಸಕರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡಾಗ, ಶಾಸಕರು ನೀವು ನನಗೆ ಮುಖ್ಯವಲ್ಲ. ನನಗೆ ಮುಖ್ಯವಾಗಿರುವುದು ನಾಗರಾಜ್ ಜನಾಂಗಕ್ಕೆ ಸೇರಿದ 9 ಸಾವಿರ ಓಟು ಎಂದಿದ್ದಾರೆ. ಅಲ್ಲದೆ ಮತ್ತೆ ತಮ್ಮನ್ನು ಭೇಟಿಯಾಗದಂತೆ ಬೆದರಿಕೆ ಹಾಕಿ ಕಳುಹಿಸಿದ್ದಾರೆ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಶಾಸಕ ಹಾಗೂ ಇತರ 12 ಮಂದಿ ವಿರುದ್ಧ ಎಸ್ ಸಿ ಎಸ್ ಟಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




