ಮಂಗಳೂರು: ನನ್ನ ಸಾವಿಗೆ ಕಾಲೇಜಿನ ಆಡಳಿತ ಮಂಡಳಿ ಕಾರಣ” ಎಂದು ಡೆತ್ ನೋಟು ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ
ಮಂಗಳೂರು : ಮಂಗಳೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ, ಬೆಂಗಳೂರು ಕುಮಾರಸ್ವಾಮಿ ಬಡಾವಣೆಯ ನಿವಾಸಿ 20 ವರ್ಷದ ಭರತ್ ಎಂಬಾತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ಹೊಟೇಲ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಓದುತ್ತಿದ್ದ ಭರತ್ ತಾನು ವಾಸವಿದ್ದ ಉರ್ವ ಸ್ಟೋರ್ ಸಮೀಪದ ಪಿ.ಜಿ.ಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಮುನ್ನ ಭರತ್ ತಾಯಿಗೆ ಕರೆ ಮಾಡಿದ್ದಾರೆ. ಆ ವೇಳೆ ಕರೆ ಸ್ವೀಕರಿಸಲು ತಾಯಿಗೆ ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ. ನನ್ನ ಸಾವಿಗೆ ಕಾಲೇಜಿನ ಆಡಳಿತ ಮಂಡಳಿ ಕಾರಣ,ಈ ಕಾಲೇಜಿಗೆ ಬಂದು ಒಂದುವರೆ ವರ್ಷವನ್ನು ಹಾಳು ಮಾಡಿದೆ.
ಕಾಲೇಜಿನಲ್ಲಿ ಸರಿಯಾಗಿ ತರಗತಿಗಳು ನಡೆಯುವುದಿಲ್ಲ, ಶಿಕ್ಷಕರಿಲ್ಲ,ಕಾಲೇಜು ಆಡಳಿತ ಮಂಡಳಿ ನನಗೆ ಮೋಸ ಮಾಡಿತು. ಕೇವಲ ಹಣ ಮಾಡುತ್ತಿದ್ದಾರೆ.
ನನ್ನ ಸಾವಿಗೆ ಕಾಲೇಜ್ ಆಡಳಿತ ಮಂಡಳಿ ಕಾರಣ ಎಂದು ಭರತ್ ಸಾಯುವ ಮುನ್ನ ಡೆತ್ ನೋಟನ್ನು ಬರೆದಿಟ್ಟಿದ್ದಾನೆ.
ಜೊತೆಗೆ ‘ಕಾಲೇಜಿನ ಪ್ರಾಧ್ಯಾಪಕರೊಬ್ಬರು ತಾನು ಮಾಡಿದ ಪ್ರಾಜೆಕ್ಟ್ ವರ್ಕ್ ಸರಿ ಇಲ್ಲ ಎಂದು ಸಹಿ ಮಾಡದೆ ಮನಸ್ಸಿಗೆ ನೋವಾಗುವಂತೆ ನಡೆದುಕೊಂಡರು. ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಆದುದರಿಂದ ಈ ಲೋಕವನ್ನು ತ್ಯಜಿಸುತ್ತಿದ್ದೇನೆ’ ಎಂದು ಭರತ್ ತನ್ನ ಪೋಷಕರಿಗೆ ಕೊನೆಯ ಮೆಸೇಜ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿರುವ ಮೃತ ಭರತ್‌ನ ತಂದೆ, ತಾಯಿ ಆಕ್ರಂದನ ಮುಗಿಲು ಮುಟ್ಟಿದ್ದು ಮಗನ ಸಾವಿಗೆ ಕಾರಣರಾಗಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡಬೇಕು ಮನವಿ ಮಾಡಿದ್ದಾರೆ.
ಉರ್ವ ಪೊಲೀಸ್ ಠಾಣೆಗೆ ಪೋಷಕರು ಈ ಬಗ್ಗೆ ದೂರು ನೀಡಿದ್ದಾರೆ.ಅದರಂತೆ ಪ್ರಕರಣ ದಾಖಲಾಗಿದೆ.






