ವನಿತಾ ಏಕದಿನ ವಿಶ್ವಕಪ್: ಮಂಧನಾ, ಹರ್ಮನ್ ಪ್ರೀತ್ ಕೌರ್ ಭರ್ಜರಿ ಶತಕ
ಹ್ಯಾಮಿಲ್ಟನ್: ವನಿತಾ ಏಕದಿನ ವಿಶ್ವಕಪ್ ನ ಮೂರನೇ ಪಂದ್ಯದಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಸೆಣಸಾಡುತ್ತಿದೆ. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಮತ್ತು ಉಪನಾಯಕಿ ಹರ್ಮನ್ ಪ್ರೀತ್ ಕೌರ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.
ಅವಳಿ ಶತಕದ ನೆರವಿನಿಂದ ಭಾರತ ವನಿತೆಯರ ತಂಡ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 317 ರನ್ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಅಯ್ಕೆ ಮಾಡಿದ ಭಾರತ ತಂಡಕ್ಕೆ ಯಾಸ್ತಿಕಾ ಭಾಟಿಯಾ ಉತ್ತಮ ಆರಂಭ ನೀಡಿದರು. ವೇಗವಾಗಿ ಆಡಿದ ಯಾಸ್ತಿಕಾ 21 ಎಸೆತದಲ್ಲಿ 31 ರನ್ ಗಳಿಸಿದರು. ಆದರೆ ನಂತರ ಮಿಥಾಲಿ ಮತ್ತು ದೀಪ್ತಿ ರೂಪದಲ್ಲಿ ತಂಡ ಸತತ ವಿಕೆಟ್ ಕಳೆದುಕೊಂಡಿತು.
78 ರನ್ ಗೆ ಮೂರು ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ಮಂಧನಾ ಮತ್ತು ಹರ್ಮನ್ ನಾಲ್ಕನೇ ವಿಕೆಟ್ ಗೆ 184 ರನ್ ಗಳ ಜೊತೆಯಾಟವಾಡಿದರು. 119 ಎಸೆತ ಎದುರಿಸಿದ ಸ್ಮೃತಿ ಎರಡು ಸಿಕ್ಸರ್ ಮತ್ತು 13 ಬೌಂಡರಿ ನೆರವಿನಿಂದ 123 ರನ್ ಗಳಿಸಿದರೆ, 107 ಎಸೆತ ಎದುರಿಸಿದ ಹರ್ಮನ್ ಎರಡು ಸಿಕ್ಸರ್ ಮತ್ತು 10 ಬೌಂಡರಿ ನೆರವಿನಿಂದ 109 ರನ್ ಬಾರಿಸಿದರು.




