ಅಪರಿಚಿತ ವ್ಯಕ್ತಿಯ ಶವ ಪತ್ತೆ ಪ್ರಕರಣ: ಮಾಜಿ ಕಾಂಗ್ರೆಸ್ ಶಾಸಕನ ಪುತ್ರ ಸೇರಿ 8 ಆರೋಪಿಗಳ ಬಂಧನ
ಮಂಡ್ಯ: ತಾಲ್ಲೂಕಿನ ಪಂಡಿತಹಳ್ಳಿ ಬಳಿ ಫೆ.9ರಂದು ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವ ಪತ್ತೆ ಪ್ರಕರಣ ಭೇದಿಸಿರುವ ಪೊಲೀಸರು ಕೆ.ಆರ್.ಪೇಟೆ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಕೆ.ಬಿ.ಚಂದ್ರಶೇಖರ್ ಪುತ್ರ ಶ್ರೀಕಾಂತ್ ಸೇರಿದಂತೆ 8 ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.
ಆರೋಪಿಗಳು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಪಂಡಿತಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿ ಮೃತದೇಹ ಬಿಸಾಡಿ ಹೋಗಿದ್ದರು. ಕೊಲೆಯಾದ ವ್ಯಕ್ತಿ ಕೊಳ್ಳೇಗಾಲ ಮೂಲದ ಸಲೀಂ(40) ಎಂಬುದು ಪತ್ತೆಯಾಗಿತ್ತು.
ಘಟನೆಯ ನಂತರ ಕೆ.ಆರ್.ಪೇಟೆ ಮೂಲದ ಮೂವರು ವ್ಯಕ್ತಿಗಳು ತಾವೇ ಕೊಲೆಮಾಡಿದ್ದಾಗಿ ತಪ್ಪೊಪ್ಪಿಕೊಂಡು ಶರಣಾಗಿದ್ದರು. ಆರೋಪಿಗಳ ಬಗ್ಗೆ ಅನುಮಾನಗಳಿದ್ದ ಕಾರಣ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದರು.
ಪ್ರಭಾವಿಯಾಗಿದ್ದ ಶ್ರೀಕಾಂತ್ ಕೊಲೆ ಆರೋಪದಿಂದ ತಪ್ಪಿಸಿಕೊಳ್ಳಲು ಮೂವರು ಮಾತ್ರ ಶರಣಾಗುವಂತೆ ಮಾಡಿದ್ದ, ಆ ಮೂಲಕ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ.
ಆದರೆ ವಿಚಾರಣೆ ನಂತರ ಆರೋಪ ಬಯಲಾಗಿದ್ದು ಶ್ರೀಕಾಂತ್ ಸೇರಿದಂತೆ ಗ್ರಾ.ಪಂ ಮಾಜಿ ಸದಸ್ಯ ಕುಮಾರ್, ಬೆಂಗಳೂರಿನ ವಜ್ರಮಣಿ, ಪುನೀತ್, ಆನಂದ್, ಹಾಸನದ ಸೋಮಶೇಖರ್ ಸೇರಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.