November 21, 2024

ವಿಟ್ಲ ಪ.ಪಂ ಚುನಾವಣೆ ಎಸ್ ಡಿ ಪಿ ಐ ವಿಜೇತ ಅಭ್ಯರ್ಥಿಗೆ ಅಭಿನಂದನಾ ಕಾರ್ಯಕ್ರಮ: ಬಜರಂಗದಳ ಮುಖಂಡನಿಂದ ದಲಿತ ಯುವಕನ ಹತ್ಯೆ ನಡೆದಾಗ ಏಕೆ ಚರ್ಚೆ ನಡೆಯುತ್ತಿಲ್ಲ: ಭಾಸ್ಕರ್ ಪ್ರಸಾದ್

0

ವಿಟ್ಲ: ಮಹಾತ್ಮ ಗಾಂಧಿ, ಗೌರಿ ಲಂಕೇಶ್ ಹತ್ಯೆ ಮಾಡಿರುವ ಕರಾಳ ಇತಿಹಾಸ ಇರುವ ಬಿಜೆಪಿ ಮತ್ತು ಸಂಘಪರಿವಾರ ನಮಗೆ ಪಾಠ ಮಾಡುವ ಅವಶ್ಯಕತೆ ಇಲ್ಲ. ಅಭಿವೃದ್ಧಿ ಕೆಲಸ ಮಾಡಲಾಗದ ನಾಲಾಯಕ್ ಬಿಜೆಪಿ ಸರಕಾರ ಧರ್ಮಗಳ ನಡುವೆ ಕೋಮು ಬೀಜ ಬಿತ್ತುವ ಕೆಲಸ ಮಾಡುವ ಮೂಲಕ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಹೇಳಿದರು.

ಅವರು ಒಕ್ಕೆತ್ತೂರು ಮೈದಾನದಲ್ಲಿ ನಡೆದ ಎಸ್ ಡಿ ಪಿ ಐ ವಿಟ್ಲ ಪಟ್ಟಣ ಸಮಿತಿ ವತಿಯಿಂದ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗೆ ಸನ್ಮಾನ ಮತ್ತು ಮತದಾರರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಜೆಪಿ ಮತ್ತು ಸಂಘ ಪರಿವಾರ ತ್ರಿವಳಿ ತಲಾಕ್, ಎನ್ ಆರ್ ಸಿ, ಲವ್ ಜಿಹಾದ್ , ಹಿಜಾಬ್ ಹೀಗೆ ಮೊದಲಾದ ವಿವಾದವನ್ನು ತಂದು ಜನರ ಮುಂದಿಟ್ಟು ಮುಸ್ಲಿಮರನ್ನು ಭಯಪಡಿಸಲು ಮುಂದಾಗುತ್ತಿದೆ. ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಸಾಧ್ಯವಾಗದಿದ್ದಾಗ ಇಂತಹ ವಿವಾದವನ್ನು ಹುಟ್ಟು ಹಾಕಿ, ಹಿಂದೂ ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವಂತೆ ಮಾಡುತ್ತಿದೆ. ಧರ್ಮಸ್ಥಳದಲ್ಲಿ ಭಜರಂಗದಳ ಮುಖಂಡನಿಂದ ದಲಿತ ಯುವಕನ ಹತ್ಯೆ ಮಾಡಿದಾಗ ಯಾವುದೇ ಚರ್ಚೆ ನಡೆಯುತ್ತಿಲ್ಲ ಎಂದು ದೂರಿದರು.

ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಮಾತನಾಡಿ ಶಿವಮೊಗ್ಗದಲ್ಲಿ ಹರ್ಷ ಹತ್ಯೆ ವಿಚಾರದಲ್ಲಿ ಘರ್ಷಣೆ ನಡೆಯುತ್ತದೆ. ಬಳಿಕ ಇಲ್ಲಿಯ ಶಾಸಕರು ಮಂತ್ರಿಗಳು ಪರಿಹಾರ ನೀಡುತ್ತಾರೆ. ಆದರೆ ಧರ್ಮಸ್ಥಳದಲ್ಲಿ ಹತ್ಯೆಯಾದ ದಲಿತ ಯುವಕನ ಹತ್ಯೆಯಾದಾಗ ಯಾರೂ ಕೂಡಾ ಆತನ ಮನೆಗೆ ಭೇಟಿ ನೀಡಿಲ್ಲ. ಎಂದು ಆರೋಪಿಸಿದ ಅವರು ಮತಾಂತರ, ಹಿಜಾಬ್, ವಿಚಾರ ಬಂದಾಗ ನಿಭಾಯಿಸಿದ್ದು, ಎಸ್ ಡಿ ಪಿ ಐ ಪಕ್ಷ ಹೊರತು ಕಾಂಗ್ರೆಸ್ ಪಕ್ಷ ಅಲ್ಲ. ಹಿಜಾಬ್ ವಿಚಾರದಲ್ಲಿ ಯಾರೂ ಹೇಳಿಕೆ ನೀಡಬಾರದು ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. ನಾರಾಯಣ ಗುರುಗಳ ಸ್ತಬ್ದ ಚಿತ್ರಗಳಿಗೆ ಅವಮಾನ ಮಾಡಲಾಗಿದೆ ಅದನ್ನು ಮರೆ ಮಾಚಲು ಬಿಜೆಪಿ ಹಿಜಾಬ್ ವಿವಾದವನ್ನು ಸೃಷ್ಟಿಸುವ ರಣತಂತ್ರ ರೂಪಿಸಿದೆ. ಮುಂದಿನ ದಿನಗಳಲ್ಲಿ ಎಸ್ ಡಿ ಪಿ ಐ ಅಧಿಕಾರ ಹಿಡಿಯಲಿದ್ದು, ಕೋಮುವಾದಿಗಳಿಗೆ ತಕ್ಕ ಪಾಠ ಕಲಿಸಲಿದೆ ಎಂದರು.

ವುಮೆನ್ ಇಂಡಿಯಾ ಮೂವ್ ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದ ತಸ್ಲಿಮಾ, ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಪ್ ಪುತ್ತೂರು, ಕಾರ್ಯದರ್ಶಿ ಶಾಫಿ ಬೆಳ್ಳಾರೆ, ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್, ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ವುಮೆನ್ ಇಂಡಿಯಾ ಮೂವ್ ಮೆಂಟ್ ಜಿಲ್ಲಾಧ್ಯಕ್ಷೆ ನಸ್ರೀಯಾ ಬೆಳ್ಳಾರೆ, ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್, ಜಿಲ್ಲಾ ಕಾರ್ಯದರ್ಶಿ ಶಾಕೀರ್ ಅಳಕೆಮಜಲು, ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು, ಬಂಟ್ವಾಳ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಖಲಂದರ್ ಪರ್ತಿಪ್ಪಾಡಿ, ಪಟ್ಟಣ ಪಂಚಾಯಿತಿ ನೂತನ ಸದಸ್ಯೆ ಶಾಕೀರ ಅಬ್ದುಲ್ಲ, ಸಮಿತಿ ಅಧ್ಯಕ್ಷ ರಫೀಕ್ ಪೊನ್ನೋಟ್ಟು, ವಿ.ಎಸ್ ಮೊಹಮ್ಮದ್ ಉಪಸ್ಥಿತರಿದ್ದರು.‌
ಮುಸ್ತಾಫ ಡಿ.ಬಿ ಸ್ವಾಗತಿದರು. ಸಿದ್ದೀಕ್ ಬೀಟಿಗೆ ನಿರೂಪಿಸಿದರು. ಎಂ ಕೆ ಮುನೀರ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!