ಸುಳ್ಯ ಎನ್ಎಂಸಿ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ತರಗತಿಗೆ ಅನುಮತಿ ನಿರಾಕರಣೆ:
ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ
ಸುಳ್ಯ: ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿರುವ ಹಿಜಾಬ್ ಪ್ರಕರಣ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರತಿಷ್ಠಿತ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಗಳನ್ನು ತರಗತಿಗೆ ಪ್ರವೇಶ ನೀಡದ ಹಿನ್ನೆಲೆಯಲ್ಲಿ ಅದನ್ನು ಪ್ರಶ್ನಿಸಿ ಕೆಲವು ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಉಪನ್ಯಾಸಕರು ಸಿಬ್ಬಂದಿಗಳ ನಡುವೆ ಚರ್ಚೆ ನಡೆದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಕೆಲವು ವೆಬ್ಸೈಟ್ ವರದಿಗಳಲ್ಲಿ ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡಿತ್ತು. ಮೊದಲಿಗೆ ಘಟನೆ ನಡೆದ ಅದೇ ದಿನ ಸಂಜೆ ಸಂಸ್ಥೆಯ ಮುಖ್ಯಸ್ಥರು ಹಾಗೂ ಉಪನ್ಯಾಸಕರುಗಳು ಸಭೆಯನ್ನು ನಡೆಸಿ ಫೆ 17 ರಿಂದ ಫೆ 19 ರವರೆಗೆ ಸಂಸ್ಥೆಗೆ ರಜೆಯನ್ನು ನೀಡಲಾಗಿತ್ತು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳ ಹಿಂದೆ ವಿದ್ಯಾರ್ಥಿಗಳ ಪೋಷಕರಿಗೆ ಸಂಸ್ಥೆಯಿಂದ ಪತ್ರ ಹೋಗಿದ್ದು ಅದರಲ್ಲಿ ವಿದ್ಯಾರ್ಥಿನಿಗಳು ಫೆಬ್ರವರಿ 21 ರಂದು ಕಾಲೇಜಿಗೆ ಮತ್ತೆ ಹಾಜರಾಗುವಂತೆ ಹಾಗೂ ಬರುವ ಸಂದರ್ಭದಲ್ಲಿ ಹಿಜಾಬ್ ದರಿಸದೆ ಬರುವ ಬಗ್ಗೆ ಪತ್ರದಲ್ಲಿ ತಿಳಿಸಲಾಗಿತ್ತು.
ಆದರೆ ಇಂದು ಬೆಳಿಗ್ಗೆ ಕಾಲೇಜಿಗೆ ಬಂದ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸಲು ಮುಂದಾದಾಗ ಮತ್ತೊಮ್ಮೆ ಉಪನ್ಯಾಸಕರು ಅವರನ್ನು ತಡೆದು ನಿಲ್ಲಿಸಿದ್ದಾರೆ ಎನ್ನಲಾಗಿದೆ.
ಇದನ್ನು ಪ್ರಶ್ನಿಸಿ ಕೆಲವು ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿಗಳು ಉಪನ್ಯಾಸಕರುಗಳ ನಡುವೆ ಮಾತನಾಡುತ್ತಿರುವ ವಿಡಿಯೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಇಂದು ಬೆಳಿಗ್ಗೆಯಿಂದ ಹರಿದಾಡುತ್ತಿದ್ದು ಮತ್ತೊಮ್ಮೆ ಪ್ರಕರಣ ಜಟಾಪಟಿ ಗೊಂಡಂತೆ ಕಾಣುತ್ತಿದೆ.
ವಿಷಯ ತಿಳಿದ ಕೆಲವು ವಿದ್ಯಾರ್ಥಿನಿಗಳ ಪೋಷಕರು ಕಾಲೇಜಿಗೆ ಹೋಗಿರುತ್ತಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಮುಂಜಾಗ್ರತಾ ಕ್ರಮ ವಹಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.




