March 21, 2026

ಅಜಿಲಮೊಗರು: ನೇತ್ರಾವತಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ; ಮೂರು ದೋಣಿ, ಅಪಾರ ಪ್ರಮಾಣದ ಮರಳು ಜಪ್ತಿ

0
IMG-20220215-WA0146.jpg

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಗ್ರಾಮದ ಅಂಜಿಮೊಗರು ವ್ಯಾಪ್ತಿಯ ನೇತ್ರಾವತಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಭೂ ವಿಜ್ಞಾನಿಗಳು ಬುಧವಾರ ದಾಳಿ ನಡೆಸಿ ಮೂರು ದೋಣಿ ಹಾಗೂ ಅಪಾರ ಪ್ರಮಾಣದ ಮರಳನ್ನು ಜಪ್ತಿ ಮಾಡಿದ್ದಾರೆ.

ಮಣಿನಾಲ್ಕೂರು ಗ್ರಾಮದಲ್ಲಿ ಅಜಿಲಮೊಗರು ನೇತ್ರಾವತಿ ನದಿಯಲ್ಲಿ ಮರಳುಗಾರಿಕೆ ನಡೆಸಲಾಗುತ್ತಿದೆ ಎಂಬ ದೂರಿನ ಅನ್ವಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಪಂಚಾಯತ್ ಸಹಯೋಗದಲ್ಲಿ ದಾಳಿ ನಡೆಸಿ ಪರಿಶೀಲಿಸಿದಾಗ ಇಲ್ಲಿ ಮೂರು ಕಬ್ಬಿಣದ ದೋಣಿಗಳಲ್ಲಿ ಮರಳನ್ನು ಜಾಲಿಯಿಂದ ತೆಗೆದು ತುಂಬಿಸಿರುವುದು ಕಂಡುಬಂದಿದೆ.

ಸ್ಥಳೀಯರ ಸಹಕಾರದಿಂದ ಒಂದು ದೋಣಿಯನ್ನು ವ್ಯವಸ್ಥೆ ಮಾಡಿಕೊಂಡು ಪರಿಶೀಲಿಸಿದಾಗ ಮೂರು ಕಬ್ಬಿಣದ ದೋಣಿಗಳಲ್ಲಿ ಮೋಟಾರು ಅಳವಡಿಸಿ ದೋಣಿಗಳಲ್ಲಿ ಸಿಲಿಂಡರ್ ಗ್ಯಾಸ್‌ಗಳನ್ನು ಅಳವಡಿಸಿಕೊಂಡು ಮರಳನ್ನು ನದಿಯಿಂದ ಎತ್ತುತ್ತಿರುವುದು ಕಂಡುಬಂದಿದೆ. ಒಟ್ಟು 8 ಜನರಂತೆ ಮೂರು ದೋಣಿಗಳಲ್ಲಿ ಉತ್ತರ ಪ್ರದೇಶದ ಹಿಂದಿ ಭಾಷಿಗರನ್ನು ಬಳಸಿಕೊಂಡು ಮರಳು ತೆಗೆಯುತ್ತಿರುವುದು ಪತ್ತೆಯಾಗಿದೆ.

ಮರಳು ತೆಗೆಯುವ ಕಾರ್ಮಿಕರಲ್ಲಿ ಇದರ ಮಾಲಿಕರ ಕುರಿತು ವಿಚಾರಿಸಿದಾಗ ಚರಣ್ ಎಂದು ತಿಳಿಸಿದ್ದಾರೆ. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ದಾಖಲೆಗಳ ಪರಿಶೀಲನೆಯಂತೆ ಚರಣ್ ಕುಮಾರ್ ಬಿನ್ ರವೀಂದ್ರ ಸನಿಲ್ ಎಂಬವರು ಬಂಟ್ವಾಳದ ಬರಿವಾಳಮಾಡ ಗ್ರಾಮದ ಜುಮಾದಿಗುಡ್ಡೆ ನಿವಾಸಿ ಎಂದು ಕಂಡುಬಂದಿದೆ.

ಇವರು ಕಡೇಶ್ವಾಲ್ಯ ಗ್ರಾಮದ ಸ.ನಂ.1/ರಲ್ಲಿ ಹೊಂದಿಕೊಂಡಂತೆ ಇರುವ ನೇತ್ರಾವತಿ ನದಿ ಪಾತ್ರದಲ್ಲಿನ 6.92 ಎಕ್ರೆ ವಿಸ್ತೀರ್ಣಕ್ಕೆ ಮರಳು ಬ್ಲಾಕ್ ಗುತ್ತಿಗೆ ಹೊಂದಿದ್ದಾರೆ. 2019ರ ಡಿ.26ರಿಂದ 5 ವರ್ಷಗಳವರೆಗೆ ಉಪಖನಿಜ ನಿಯಮಾವಳಿಯಂತೆ ಮಂಜೂರು ಮಾಡಲಾಗಿತ್ತು. ಆದರೆ ಇದರ ಅಕ್ಷಾಂಶ ಹಾಗೂ ರೇಖಾಂಶ ಪರಿಶೀಲಿಸಿದಾಗ ಮರಳು ಬ್ಲಾಕ್‌ಗೂ ಅವರು ನಡೆಸುತಿದ್ದ ಮರಳುಗಾರಿಕೆ ಸ್ಥಳಕ್ಕೆ 1.5ಕಿಲೋ ಮೀಟರ್ ಅಂತರ ಕಂಡುಬಂದಿದೆ. ಇದು ಅಕ್ರಮ ಎಂದು ಪರಿಶೀಲನೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಮರಳನ್ನು ಜಪ್ತಿ ಮಾಡಿ ಸೊತ್ತು ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!