ಸುಳ್ಯ: ಪಂಜಿಗಾರಿನಲ್ಲಿ ಲಾರಿ ಪಲ್ಟಿಯಾಗಿ ಗಂಭೀರ ಗಾಯಗೊಂಡಿದ್ದ ಚಾಲಕ ಮೃತ್ಯು
ಸುಳ್ಯ: ಪಂಜಿಗಾರಿನಲ್ಲಿ ಲಾರಿ ಪಲ್ಟಿಯಾಗಿ ಗಂಭೀರ ಗಾಯಗೊಂಡಿದ್ದ ಲಾರಿ ಚಾಲಕ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ರಬ್ಬರ್ ಶೀಟ್ ಹೇರಿಕೊಂಡು ಬೆಳ್ಳಾರೆ ಕಡೆಯಿಂದ ನಿಂತಿಕಲ್ಲು ಕಡೆಗೆ ಹೋಗುವ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಂಜಿಗಾರು ತಿರುವಿನಲ್ಲಿ ರಸ್ತೆ ಬದಿಗೆ ಮಗುಚಿ ಬಿದ್ದ ಪರಿಣಾಮ ಚಾಲಕ ತಮಿಳುನಾಡಿನ ಶಿವಕುಮಾರ್ ಗಂಭೀರ ಗಾಯಗೊಂಡಿದ್ದರು.

ಗಾಯಗೊಂಡ ಚಾಲಕನನ್ನು ಕೂಡಲೇ ಆಂಬ್ಯುಲೆನ್ಸ್ ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗಿತ್ತು.
ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಆತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಲಾರಿಯು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕ್ರೈನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಲಾಯಿತು.
ಲಾರಿಯ ಎಲ್ಲಾ ಭಾಗಗಳು ಬೇರ್ಪಟ್ಟಿದ್ದು ರಸ್ತೆ ಬದಿಯಲ್ಲಿ ಬಿದ್ದಿದೆ.
ಲಾರಿ ಮಗುಚಿ ಬೀಳುವ ರಭಸಕ್ಕೆ ಅದರಲ್ಲಿದ್ದ ರಬ್ಬರ್ ಶೀಟ್ ಗಳು ಕೂಡ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದೆ.
ಇದರಿಂದ ವಾಹನ ಸಂಚಾರಕ್ಕೂ ಕೆಲಹೊತ್ತು ಸಮಸ್ಯೆಯಾಯಿತು.




