ಹಿಜಾಬ್ ಅರ್ಜಿ ವಿಚಾರಣೆ ನಾಳೆಗೆ ಮಧ್ಯಾಹ್ನ 2.30ಕ್ಕೆ ಮತ್ತೆ ಮುಂದೂಡಿಕೆ: ಎರಡು ಅರ್ಜಿಗಳ ಪೈಕಿ ಮೊದಲ ಅರ್ಜಿ ಹಿಂಪಡೆಯಲು ಹೈಕೋರ್ಟ್ ಅನುಮತಿ
ಬೆಂಗಳೂರು: ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮತ್ತೆ ಹೈಕೋರ್ಟ್ ತ್ರಿಸದಸ್ಯ ಪೀಠದಿಂದ ಅರ್ಜಿ ವಿಚಾರಣೆ ನಡೆದಿದ್ದು ಇಂದು ಕೂಡ ಹಿಜಾಬ್ ಅರ್ಜಿ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮತ್ತೆ ಮುಂದೂಡಿಕೆ ಮಾಡಿದೆ
ನ್ಯಾಯಮೂರ್ತಿ ರಿತುರಾಜ್ ಅವಾಸ್ಥಿ, ಕಾಜಿ ಜೈಬುನ್ನಿಸಾ ಮೊಹಿಯ್ಯುದ್ದೀನ್, ಕೃಷ್ಣ ದೀಕ್ಷಿತ್ ಅವರ ನ್ಯಾಯಪೀಠದ ಮುಂದೆ ಅರ್ಜಿ ವಿಚಾರಣೆ ನಡೆದಿದೆ.
ಇಂದು ಕೂಡ ಅರ್ಜಿದಾರರ ಪರ ವಕೀಲರಾದ ದೇವದತ್ ಕಾಮತ್ ವಾದವನ್ನು ಪೀಠದ ಮುಂದೆ ಮಂಡಿಸಿದ್ದಾರೆ.
ವಿದ್ಯಾರ್ಥಿನಿಯರನ್ನು ಹಿಂದೂ ಮುಸ್ಲಿಂ ಎಂದು ಪ್ರತ್ಯೇಕಿಸುವುದು ತಪ್ಪಾಗುತ್ತದೆ.
ಸಮವಸ್ತ್ರದ ಜೊತೆಗೆ ಹಿಜಾಬ್ ಗೆ ಅವಕಾಶ ನೀಡಬೇಕು.ಹಿಜಾಬ್ ಧಾರ್ಮಿಕ ಹಕ್ಕು, ಅಲ್ಪಸಂಖ್ಯಾತರಿಗೆ ಆರ್ಟಿಕಲ್ 29 ರಕ್ಷಣೆ ಕೊಡುತ್ತದೆ ಎಂದು ಕೂಡ ಪೀಠದ ಮುಂದೆ ಹೇಳಿದ್ದಾರೆ. ಹಿಜಾಬ್ ಕಾರಣಕ್ಕೆ ಅಮಾನತು ಮಾಡಬಾರದು. ಹೈಕೋರ್ಟ್ ಮಧ್ಯಂತರ ಆದೇಶವನ್ನು ಮುಂದುವರಿಸಬಾರದು ಎಂದು ಕೋರ್ಟ್ ನಲ್ಲಿ ದೇವದತ್ ಕಾಮತ್ ಹೇಳಿದ್ದಾರೆ.
ಯುವತಿಯೋರ್ವಳು 2 ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಮೊದಲ ಅರ್ಜಿ ಹಿಂಪಡೆಯಲು ಹೈಕೋರ್ಟ್ ಅನುಮತಿ ನೀಡಿದೆ.
ಬಳಿಕ ರವಿವರ್ಮ ಕುಮಾರ್ ಅವರು ವಾದವನ್ನು ಮಂಡಿಸಿದ್ದಾರೆ. ಸರಕಾರ ಹಿಜಾಬ್ ಕುರಿತು ಸಮಿತಿ ರೂಪಿಸಿಲ್ಲ. ರಚನೆ ಮಾಡಿದ್ದಷ್ಟೇ, ಸಮಿತಿಯನ್ನು ಜಾರಿಗೆ ತಂದಿಲ್ಲ. ಹಿಜಾಬ್ ಧರಿಸಬಾರದು ಎಂದು ಸರಕಾರ ಹೇಳಿಯೇ ಇಲ್ಲ , ಈ ಬಗ್ಗೆ ಯಾವುದೇ ನಿರ್ಬಂಧವಿಲ್ಲ. ಸರಕಾರ ಸಮವಸ್ತ್ರ ನೀತಿ ಜಾರಿಗೆಗೊಳಿಸಿಯೇ ಇಲ್ಲ ಎಂದು ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ. ಸಮವಸ್ತ್ರ ರೂಪಿಸುವುದೇ ಅವ್ಯವಸ್ಥೆ, ಅರ್ಥಹೀನ ಎಂದು ಸರಕಾರದ ಆದೇಶವನ್ನು ಹೇಳಿದ್ದಾರೆ. ಕರ್ನಾಟಕ ಶಿಕ್ಷಣ ಕಾಯ್ದೆ ಬಗ್ಗೆ ಕೂಡ ವಿವರಣೆ ನೀಡಿದ್ದಾರೆ.




