ಆದರ್ಶ ವ್ಯಕ್ತಿತ್ವದ ಕುಂಞಿಮೋನು ಹಾಜಿ ಇನ್ನು ನೆನಪು ಮಾತ್ರ
ವರದಿ: ರಶೀದ್ ವಿಟ್ಲ: ಕಳೆದ 10 ವರ್ಷಗಳ ಹಿಂದಿನ ಮಾತು. ವಿಟ್ಲ ಬಾಕಿಮಾರಿನಲ್ಲಿ ಟಿಂಬರ್ ಮತ್ತು ಹೆಂಚು ವ್ಯಾಪಾರ ಮಾಡುವ ಕಾನತ್ತಡ್ಕದ ಮೊಯ್ದುಕುಟ್ಟಿ (ನಾವು ಕುಂಞಿಮೋನುಚ್ಚ ಅಂತ ಕರೆಯುತ್ತಿದ್ದೆವು.) ಅವರು ಹಜ್ ಸೀಝನಲ್ಲಿ ಪ್ರತಿ ಬಾರಿ ನನ್ನ ಅಂಗಡಿಗೆ ಬಂದು ಈ ಬಾರಿ ಹಜ್ ಗೆ ಎಷ್ಟಾಗುತ್ತದೆ ಎಂದು ವಿಚಾರಿಸಿ ಹೋಗುತ್ತಿದ್ದರು. ಎರಡ್ಮೂರು ವರ್ಷ ಹೀಗೇ ಕೇಳಿದಾಗ ಯಾಕೆ ಕೇಳ್ತೀರಾ? ಅಂತ ಪ್ರಶ್ನಿಸಿದೆ. “ನಿನ್ನಲ್ಲಿ ನಾನು ಮೊದಲ ವರ್ಷ ಕೇಳಿದಾಗ ತುಂಬಾ ಹಣ ಕಮ್ಮಿ ಇತ್ತು. ಕಳೆದ ವರ್ಷ ಕೇಳಿದಾಗಲೂ ಸರಿದೂಗಿಸಲು ಆಗಿಲ್ಲ. ಈ ವರ್ಷ 40 ಸಾವಿರ ಕಮ್ಮಿ ಇದೆ. ನನ್ನ ವ್ಯವಹಾರದಲ್ಲಿ ಉಳಿತಾಯವಾದರೆ ಅಲ್ಲಾಹನು ಇಚ್ಛಿಸಿದರೆ ಬರುವ ವರ್ಷ ಹಜ್ ಗೆ ಅರ್ಜಿ ಹಾಕಬೇಕು…” ಎಂದು ಹೇಳಿದರು. ಹೇಳಿದ್ರೆ ಮನೆಯವರು, ಮಕ್ಳು ವ್ಯವಸ್ಥೆ ಮಾಡುತ್ತಾರಲ್ಲಾ ಅಂತ ಹೇಳಿದಾಗ… ಇಲ್ಲ ಇಲ್ಲ ನನ್ನ ಹಜ್ ಸತ್ಕರ್ಮ ನಾನು ದುಡಿದ ಹಣದಿಂದಲೇ ಆಗಬೇಕೆಂಬ ಅಭಿಲಾಷೆ ಎಂದರು. ಅದರಂತೆ ಅವರು ಮತ್ತವರ ಪತ್ನಿ ಹಜ್ ಗೆ ಅರ್ಜಿ ಹಾಕಿದರು. ಅದೇ ವರ್ಷ ಹಜ್ ಗೂ ತೆರಳಿದರು. ಹಜ್ ಗೆ ತೆರಳುವ ಮುನ್ನ ತಾನು ವ್ಯವಹಾರ ನಡೆಸಿದ, ಮಾತನಾಡಿದ ಎಲ್ಲರಲ್ಲೂ ಮಾತನಾಡಿಸಿ “ಹೆಚ್ಚು ಕಮ್ಮಿಯಾಗಿದ್ದರೆ ಕ್ಷಮಿಸಿ” ಎಂದು ಬೇಡಿಕೊಂಡಿದ್ದರು. ಟಿಂಬರ್ ವ್ಯವಹಾರದಲ್ಲಿ ಚಿಕ್ಕಮಗಳೂರಿನ ಒಬ್ಬರಿಗೆ 250/- ರೂ. ನೀಡಲು ಬಾಕಿ ಇತ್ತು. ಹಜ್ ಗೆ ತೆರಳುವ ಮುನ್ನ ಕಾರು ಬಾಡಿಗೆಗೆ ಮಾಡಿ ವಿಳಾಸ ಹುಡುಕಿ ಬಾಕಿ ಮೊತ್ತ ನೀಡಿ ಅವರಲ್ಲಿ ಕೇಳಿ ಬಂದಿದ್ದರು. ಇಂತಹ ಉದಾಹರಣೆಗಳು ಹಲವಾರು ಇವೆ.
ಕುಂಞಿಮೋನು ಹಾಜಿ ಇಂದು ನಮ್ಮ ಜೊತೆಗಿಲ್ಲ. ಅಲ್ಪಕಾಲದ ಅಸೌಖ್ಯದಿಂದ ನಿನ್ನೆ (26/10/2021) ನಿಧನರಾದರು. ಸಮಾಜದಲ್ಲಿ ಆದರ್ಶ ಜೀವನ ನಡೆಸಿದ್ದ ಅಜಾತಶತ್ರು ಕುಂಞಿಮೋನು ಹಾಜಿ ಅದೆಷ್ಟೋ ಜನರಿಗೆ ಸದ್ದಿಲ್ಲದೇ ಸೇವೆಗೈದ ವ್ಯಕ್ತಿತ್ವ. ನನಗೀಗಲೂ ನೆನಪಿದೆ. ಅವರ ಪರಿಚಯಸ್ಥರು ಅಥವಾ ಬಡವರು ಹೋಟೆಲ್ ಗೆ ಹೋದರೆ ಅಥವಾ ಬಸ್ಸಲ್ಲಿ ಕಂಡರೆ ಬಿಲ್ಲು ಅಥವಾ ಟಿಕೇಟನ್ನು ಇತರರು ನೀಡಲು ಬಿಡುತ್ತಿರಲಿಲ್ಲ. ಅವರು ನೀಡಿದರೇನೇ ಅವರಿಗೆ ಸಂತೃಪ್ತಿ. ನನ್ನ ಹಣವನ್ನು ಅದೆಷ್ಟೋ ಬಾರಿ ಅವರೇ ನೀಡಿದ್ದು ನನಗೀಗಲೂ ನೆನಪಿದೆ.
ಮಿತ ಭಾಷಿಯಾಗಿರುವ ಕುಂಞಿಮೋನು ಹಾಜಿ ತಮ್ಮ ನಿಧನಾ ನಂತರವೂ ತನ್ನ ಕಫನ್ ಬಟ್ಟೆಯನ್ನು (ಮೃತದೇಹದ ಬಟ್ಟೆ) ಯಾರೂ ಹಣ ಕೊಟ್ಟು ಖರೀದಿಸಬಾರದೆಂದು ಸ್ವತಃ ಅವರೇ ಮುಂಗಡವಾಗಿ ಕಪಾಟಿನಲ್ಲಿ ತೆಗೆದಿಟ್ಟಿದ್ದರು. ಇಂದು ಅವರ ಮೃತದೇಹ ನೋಡಲು ನಾನಾ ಭಾಗದ ಜನ ಸೇರಿದ್ದರು. ಅಪರಿಚಿತರೂ ಇದ್ದರು. ಅವರ ಸೇವೆ ಪಡೆದವರೂ ಜಮಾಯಿಸಿದ್ದರು. ಅಲ್ಲಾಹನು ಅವರಿಗೆ ಜನ್ನತ್ ನೀಡಿ ಅನುಗ್ರಹಿಸಲಿ. ಅವರ ಮನೆಯವರು, ಕುಟುಂಬಿಕರಿಗೆ ದುಖ ಸಹಿಸುವ ಶಕ್ತಿ ನೀಡಲಿ.
-ರಶೀದ್ ವಿಟ್ಲ.