ಮಂಗಳೂರು: ಅಪ್ರಾಪ್ತ ಯುವತಿಯರನ್ನು ಬಳಸಿ ವೇಶ್ಯಾವಾಟಿಕೆ: ಮೂವರ ಬಂಧನ
ಮಂಗಳೂರು: ನಗರದ ನಂದಿಗುಡ್ಡೆಯ ವಸತಿ ಸಮುಚ್ಚಯವೊಂದರಲ್ಲಿ ಅಪ್ರಾಪ್ತ ಯುವತಿಯರನ್ನು ಬಳಸಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಚೈಲ್ಡ್ ಲೈನ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸಹಕಾರದೊಂದಿಗೆ ಮಂಗಳೂರು ಪೊಲೀಸರು ಬೇಧಿಸಿದ್ದು, ನಾಲ್ವರು ಸಂತ್ರಸ್ತ ಯುವತಿಯರನ್ನು ರಕ್ಷಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾಲೇಜೊಂದರ ಮುಖ್ಯಸ್ಥೆ ಮತ್ತು ಸಂತ್ರಸ್ತೆ ಮಹಿಳಾ ಮತ್ತು ಕಲ್ಯಾಣ ಇಲಾಖೆ ನೀಡಿದ ದೂರಿನ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಹಲವು ದಿನಗಳಿಂದ ದಂಧೆ ನಡೆಸುತ್ತಿದ್ದ ಮಹಿಳೆಯರು ಮತ್ತು ಪುರುಷನನ್ನ ವಶಕ್ಕೆ ಪಡೆದಿದ್ದು, ಆರೋಪಿಗಳ ವಿರುದ್ದ ಪೋಕ್ಸೋ ಸೇರಿ ಇತರ ಕಾಯಿದೆಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ತಿಳಿಸಿದರು.
ಇನ್ನು ವಯಸ್ಕ ಯುವತಿಯರನ್ನು ನಿರಂತರವಾಗಿ ದಂಧೆಗೆ ಬಳಸಿಕೊಳ್ಳುತ್ತಿರುವುದು ತನಿಖೆ ವೇಳೆ ಕಂಡು ಬಂದಿದ್ದು, ರಕ್ಷಣೆ ಮಾಡಲಾದ ಸಂತ್ರಸ್ತೆಯರು ಪಿಯುಸಿ ವಿದ್ಯಾರ್ಥಿನಿಯರಾಗಿದ್ದು, ತಮ್ಮ ಮೇಲಾದ ದೌರ್ಜನ್ಯವನ್ನು ಕಾಲೇಜಿನ ಮುಖ್ಯಸ್ಥೆಯ ಬಳಿ ಹೇಳಿಕೊಂಡಿದ್ದಾರೆ.
ವೇಶ್ಯಾವಾಟಿಕೆ ನಡೆಸಲಾಗುತ್ತಿದ್ದ ಮನೆಯಲ್ಲಿ ಸಿಸಿಟಿವಿ ಅಳವಡಿಸಿ ವಿದ್ಯಾರ್ಥಿನಿಯರಿಗೆ ವಿಡಿಯೋ ಬಯಲು ಮಾಡಿ ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಕೇರಳ ಮೂಲದ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಮಹಿಳಾ ಪೊಲೀಸ್ ಠಾಣೆಯ ಸಖಿ ಕೇಂದ್ರದಲ್ಲಿ ಬಾಲಕಿಯರಿಗೆ ಕೌನ್ಸಲಿಂಗ್ ಮಾಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್ . ಶಶಿಕುಮಾರ್ ತಿಳಿಸಿದ್ದಾರೆ.




