ಪಕ್ಷ ತೊರೆದ ಸಿಎಂ ಇಬ್ರಾಹಿಂ: ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಸ್ಲಿಂ ಧಾರ್ಮಿಕ ಮುಖಂಡರು
ಬೆಂಗಳೂರು: ಅಲ್ಪ ಸಂಖ್ಯಾಾತ ಮುಸ್ಲೀಂ ಸಮುದಾಯವನ್ನು ಜಾತ್ಯತೀತ ಹೆಸರಿನಲ್ಲಿ ಕೆಲವು ರಾಜಕೀಯ ಪಕ್ಷಗಳು ದುರುಪಯೋಗ ಪಡೆಸಿಕೊಳ್ಳುತ್ತಿವೆ ಎಂದು ಮುಸ್ಲಿಂ ಧಾರ್ಮಿಕ ಮುಖಂಡರು ಹಾಗೂ ಬುದ್ದಿಜೀವಿಗಳು ಅಸಮಾಧಾನ ಹೊರ ಹಾಕಿದ್ದಾರೆ.
ಕರ್ನಾಟಕದ ಅಮಿರೇ ಷರಿಯತ್ ಮೌಲಾನ ಸಗೀರ್ ಅಹ್ಮದ್ ಅಧ್ಯಕ್ಷತೆಯಲ್ಲಿ ಭಾನುವಾರ ಮಿಲ್ಲರ್ಸ್ ರಸ್ತೆಯ ಖಾದ್ರಿಯಾ ಮಸೀದಿಯಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು ಹಾಗೂ ಬುದ್ಧಿಜೀವಿಗಳ ಸಭೆ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಸಿಎಂ ಇಬ್ರಾಹಿಂ ಅವರ ವಿಚಾರಕ್ಕೆ ಸಂಬಂಧಿಸಿದಂತೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಅಲ್ಲದೆ ರಾಜ್ಯದಲ್ಲಿ ಶೇ 12 ರಷ್ಟಿರುವ ಅಲ್ಪ ಸಂಖ್ಯಾತ ಸಮುದಾಯವನ್ನು ಓಟ್ ಬ್ಯಾಂಕ್ ಆಗಿ ಕೆಲವು ರಾಜಕೀಯ ಪಕ್ಷಗಳು ಬಳಕೆ ಮಾಡಿಕೊಳ್ಳುತ್ತಿದ್ದು, ಈ ಸಮುದಾಯಕ್ಕೆ ಯಾವುದೇ ರೀತಿಯ ಪ್ರಾತಿನಿಧ್ಯ ಹಾಗೂ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಹೋರಾಟ ನಡೆಸುತ್ತಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಧಾರ್ಮಿಕ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತಿ ವರ್ಷವೂ ಮುಸ್ಲಿಂ ಸಮುದಾಯಕ್ಕೆ ಮೀಸಲಿಡುತ್ತಿದ್ದ ಬಜೆಟ್ ಅನುದಾನ ಕಡಿತಗೊಳಿಸಲಾಗುತ್ತಿದೆ. ಮುಸ್ಲಿಂ ಸಮುದಾಯದವರ ಮೇಲೆ ಹಲ್ಲೆ, ದೌರ್ಜನ್ಯ ನಡೆದರೂ, ಜಾತ್ಯತೀತ ಪಕ್ಷಗಳು ಅದರ ವಿರುದ್ಧ ಪ್ರತಿಭಟಿಸದೇ ಜಾಣ ಮೌನ ತಾಳುತ್ತಿದ್ದಾರೆ. ಇದರಿಂದ ಮುಸ್ಲಿಂ ಸಮುದಾಯ ಸಾಕಷ್ಟು ತೊಂದರೆಗೆ ಒಳಗಾಗುವಂತಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.
ಮುಸ್ಲೀಂ ಸಮುದಾಯದ ಬಗ್ಗೆ ಇದೇ ರೀತಿಯ ನಿರ್ಲಕ್ಷ್ಯ ಮುಂದುವರೆದರೆ ಸಮುದಾಯ ಪರ್ಯಾಯ ರಾಜಕೀಯದ ಕುರಿತು ಆಲೋಚನೆ ಮಾಡಬೇಕಾಗುತ್ತದೆ ಎಂಬ ಸಂದೇಶವನ್ನು ಧಾರ್ಮಿಕ ಮುಖಂಡರು ಹಾಗೂ ಬುದ್ದಿಜೀವಿಗಳು ರವಾನೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಮೌಲಾನ ಇಫ್ತೆಖಾರ್ ಖಾಸ್ಮಿ, ಮೌಲಾನ ತನ್ವೀರ್ ಪೀರಾ ಹಾಷ್ಮಿ, ಮೌಲಾನ ಶಬ್ಬೀರ್ ನದ್ವಿ, ಮೌಲಾನ ಮಕ್ಸೂದ್ ಇಮ್ರಾನ್ ರಷಾದಿ ಮತ್ತಿತರರು ಭಾಗವಹಿಸಿದ್ದರು.