February 4, 2026

ಇಸ್ಲಾಮಿನ ಹೆಸರಿನಲ್ಲಿ ನಡೆಯುವ ಅನಾಚಾರಗಳ ವಿರುದ್ಧ ಮೊಹಲ್ಲಾ ಸಮಿತಿಗಳು ಜಾಗೃತಿ ಮೂಡಿಸಲು SMA ಕರೆ

0
IMG_20220108_152403.jpg



ಬಂಟ್ವಾಳ: ಯಾವುದೇ ಸಮುದಾಯದ ಆಚಾರ ವಿಚಾರಗಳನ್ನು ಅಪಮಾನಿಸುವುದು ಮತ್ತು ಅವರಿಗೆ ನೋವುಂಟು ಮಾಡುವುದು ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ. ಇತ್ತೀಚೆಗೆ ಬಂಟ್ವಾಳ ತಾಲೂಕಿನ ಸಾಲೆತ್ತೂರಿನಲ್ಲಿ ಪವಿತ್ರವಾದ ಮದುವೆಯ ನಂತರದ ಆಚರಣೆಯ ಹೆಸರಿನಲ್ಲಿ ಮದುಮಗ ಧರಿಸಿದ ವೇಷಭೂಷಣ ಒಂದು ವಿಭಾಗದ ಧಾರ್ಮಿಕ ಆಚರಣೆಯ ಭಾಗವಾಗಿದ್ದು, ಆ ಮೂಲಕ ಆ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಾಗಿದೆ. ಈ ಘಟನೆಯನ್ನು ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಪವಿತ್ರವಾದ ಮದುವೆಯ ಹೆಸರಿನಲ್ಲಿ ಈ ರೀತಿ ಅನಾಚಾರ ಹಾಗೂ ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ರೀತಿಯಲ್ಲಿ ಸಂಭ್ರಮಿಸುವುದರ ಬಗ್ಗೆ ಆಯಾ ಮೊಹಲ್ಲಾ ಸಮಿತಿಗಳು ತಮ್ಮ ಜಮಾಅತರಿಗೆ ವಿಶೇಷ ಜಾಗೃತಿ ಮೂಡಿಸಬೇಕು. ಸಾಲೆತ್ತೂರು ಘಟನೆಯಿಂದ ಅನ್ಯ ಸಮುದಾಯಕ್ಕೆ ಅವಮಾನ ಎನ್ನುವುದಕ್ಕಿಂತ ಮುಸ್ಲಿಂ ಸಮುದಾಯದ ಘನತೆಗೆ ಧಕ್ಕೆ ಉಂಟಾಗಿದೆ ಎನ್ನುವುದೇ ಹೆಚ್ಚು ಸೂಕ್ತ. ಅದೇ ರೀತಿ ಸಾಲೆತ್ತೂರು ಮದುವೆಗೆ ಸಂಬಂಧಿಸಿದ ಘಟನೆಯನ್ನು ಮುಂದಿಟ್ಟು ಸಮಾಜದಲ್ಲಿ ಸಾಮರಸ್ಯ ಕದಡಲು ಯತ್ನಿಸುವವರ ನಡೆ ಕೂಡ ಖಂಡನೀಯವಾದುದು. ಮೊಹಲ್ಲಾ ಆಡಳಿತ ಸಮಿತಿ ಕೂಡಲೇ ಎಚ್ಚರವಹಿಸಿ ಇಂತಹ ಅನಾಚಾರಗಳನ್ನು ಕಡ್ಡಾಯವಾಗಿ ತಮ್ಮ ತಮ್ಮ ಮೊಹಲ್ಲಾಗಳಲ್ಲಿ ನಿಷೇಧಿಸಬೇಕು. ಮುಸ್ಲಿಂ ಸಮಾಜ ತಲೆತಗ್ಗಿಸುವಂತಹ ವಾತಾವರಣ ನಿರ್ಮಾಣವಾಗುವುದರ ಬಗ್ಗೆ ಸಮಾಜ ಎಚ್ಚರದಲ್ಲಿರಬೇಕಾಗಿದೆ. ಮುಸ್ಲಿಂ ಸಮುದಾಯದಲ್ಲಿ ಧಾರ್ಮಿಕ ವಿದ್ವಾಂಸರ ನಾಯಕತ್ವವನ್ನು ಅನುಸರಿಸಿ, ಇಸ್ಲಾಂ ಧರ್ಮದ ಮಾರ್ಗಸೂಚಿಯಂತೆ ಮದುವೆ ಕಾರ್ಯಕ್ರಮ ಏರ್ಪಡಿಸಲು ಎಲ್ಲಾ ಜಮಾಅತ್ ಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಕೈಗೊಳ್ಳಬೇಕು. ಎಲ್ಲಾ ವಿಷಯದಲ್ಲೂ ಪ್ರವಾದಿಯವರು ತೋರಿಸಿಕೊಟ್ಟ ಆದರ್ಶವನ್ನು ಪಾಲಿಸಿದಾಗ ಮಾತ್ರ ಸಮುದಾಯಕ್ಕೆ ಒಳಿತಾಗುವುದು. ಇಸ್ಲಾಮಿನ ಬಗ್ಗೆ ಜ್ಞಾನವಿಲ್ಲದ ಕೆಲವು ಮಂದಿಯ ವರ್ತನೆಯಿಂದ ಸಮಾಜ ಮುಜುಗರಕ್ಕೆ ಒಳಗಾಗುವುದು ತುಂಬಾ ಖೇದಕರವಾಗಿದೆ ಎಂದು ಸಮಿತಿಯು ಅಭಿಪ್ರಾಯ ಪಟ್ಟಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಎಲ್ಲಾ ಮೊಹಲ್ಲಾಗಳಲ್ಲಿ SMA ರಾಜ್ಯ ಸಮಿತಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಸಮಾಜದಲ್ಲಿ ಬಿರುಕು ಮೂಡಿಸುವ ಕೆಲಸಕ್ಕೆ ಮುಸ್ಲಿಂ ಸಮಾಜ ಯಾವ ಸಂದರ್ಭದಲ್ಲೂ ಬೆಂಬಲ ನೀಡಲು ಸಾಧ್ಯವಿಲ್ಲ.
ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಲು ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆಯಾದರೂ ಜಿಲ್ಲೆಯಲ್ಲಿ ಶಾಂತಿಯನ್ನು ಕದಡುವ ಪ್ರಯತ್ನವನ್ನು ಮಾಡಿ ಅಹಿತಕರ ಘಟನೆ ನಡೆಸಲು ಮಾನ್ಯ ಪೋಲೀಸ್ ಇಲಾಖೆ ಯಾರಿಗೂ ಅವಕಾಶ ನೀಡಬಾರದೆಂದು SMA ರಾಜ್ಯ ಸಮಿತಿ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!