ಉಡುಪಿ: ಮೋಸ್ಟ್ ವಾಂಟೆಡ್ ಆರೋಪಿ ಗಲ್ಫ್ ನಿಂದ ಭಾರತಕ್ಕೆ ಗಡಿಪಾರು
ಉಡುಪಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ), ಗೃಹ ಸಚಿವಾಲಯ (ಎಂಹೆಚ್‌ಎ) ಮತ್ತು ಕರ್ನಾಟಕ ಪೊಲೀಸರ ಸಮನ್ವಯದೊಂದಿಗೆ ಕೇಂದ್ರ ತನಿಖಾ ದಳ (ಸಿಬಿಐ) ಕಾರ್ಯಾಚರಣೆ ನಡೆಸಿ, ಮೋಸ್ಟ್ ವಾಂಟೆಡ್ ಆರೋಪಿ ರಾಜೇಶ್ ಕೇಶವ ಆಚಾರ್ಯನನ್ನು ಶುಕ್ರವಾರ (ನವೆಂಬರ್ 27) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಎಇ) ನಿಂದ ಭಾರತಕ್ಕೆ ಗಡಿಪಾರು ಮಾಡಿಸುವಲ್ಲಿ ಯಶಸ್ವಿಯಾಗಿದೆ.
ಭೂಗತ ಪಾತಕಿ ಕಲಿ ಯೋಗೀಶ್ ಸಹಚರನಾಗಿ ಗುರುತಿಸಿಕೊಂಡಿರುವ ಆಚಾರ್ಯ, 2002ರಲ್ಲಿ ನಡೆದ ಮನೋಹರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದಾನೆ. ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಅಪರಾಧ ಸಂಖ್ಯೆ 251/2002 ರಂತೆ ದಾಖಲಾಗಿರುವ ಈ ಪ್ರಕರಣದಲ್ಲಿ, ಕೊಲೆಗೆ ಪ್ರಚೋದನೆ ನೀಡಿದ ಆರೋಪ ಈತನ ಮೇಲಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಮಾಹಿತಿಯಂತೆ, ಆಚಾರ್ಯನನ್ನು ಭಾರತಕ್ಕೆ ಕರೆತರುವ ಪ್ರಯತ್ನದ ಭಾಗವಾಗಿ 2026ರ ಮೇ ತಿಂಗಳಲ್ಲಿ ಈತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು ಮತ್ತು ಸುಮಾರು ಮೂರು ತಿಂಗಳ ಹಿಂದೆ ಪಾಸ್‌ಪೋರ್ಟ್ ರದ್ದುಪಡಿಸಲಾಗಿತ್ತು.
2002ರ ಜುಲೈನಲ್ಲಿ ಮನೋಹರ್ ಶೆಟ್ಟಿ ಹತ್ಯೆಗೆ ಆಚಾರ್ಯ ಇತರ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿದ್ದ ಎಂದು ಸಿಬಿಐ ತಿಳಿಸಿದೆ. 2019ರಲ್ಲಿ ಭಾರತದಿಂದ ಪರಾರಿಯಾಗಿದ್ದ ಆಚಾರ್ಯ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಕರ್ನಾಟಕ ಪೊಲೀಸರ ಮನವಿಯ ಮೇರೆಗೆ ನವದೆಹಲಿಯ ಇಂಟರ್‌ಪೋಲ್ ನ್ಯಾಷನಲ್ ಸೆಂಟ್ರಲ್ ಬ್ಯೂರೋ (ಎನ್‌ಸಿಬಿ) ಈತನ ವಿರುದ್ಧ ರೆಡ್ ನೋಟಿಸ್ ಪ್ರಕಟಿಸಲು ನೆರವಾಗಿತ್ತು. ಬಳಿಕ ಯುಎಇ ಅಧಿಕಾರಿಗಳು ಆತನನ್ನು ಪತ್ತೆಹಚ್ಚಿ ಬಂಧಿಸಿದ್ದು, ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಭಾರತಕ್ಕೆ ಗಡಿಪಾರು ಮಾಡಿದ್ದಾರೆ.
ನವೆಂಬರ್ 27ರಂದು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಚಾರ್ಯನನ್ನು ಕರ್ನಾಟಕ ಪೊಲೀಸರು ವಶಕ್ಕೆ ಪಡೆದಿದ್ದಾರೆ.




