ಬೆಲೆ ಏರಿಕೆಯ ಬರೆ, ಜನಸಾಮಾನ್ಯರ ಬದುಕಿಗೆ ಹೊರೆ: ಸರ್ಕಾರದ ವಿರುದ್ಧ ವಿಟ್ಲದಲ್ಲಿ SDPI ಆಕ್ರೋಶ
ವಿಟ್ಲ: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ ಹಾಗೂ KSRTC ಬಸ್ ಪ್ರಯಾಣ ದರ ಏರಿಕೆಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ವಿಟ್ಲ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.

ವಿಟ್ಲ-ಪಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಕಡಂಬು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಅವರು ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ದಿನನಿತ್ಯದ ಜೀವನ ನಿರ್ವಹಣೆಯೇ ಸವಾಲಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ಸರ್ಕಾರ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
SDPI ಪುತ್ತೂರು ನಗರ ಸಮಿತಿ ಅಧ್ಯಕ್ಷ ತಾಜುದ್ದೀನ್ ಪುತ್ತೂರು ಅವರು ಮಾತನಾಡಿ, KSRTC ಬಸ್ ಪ್ರಯಾಣ ದರ ಏರಿಕೆಯು ಕಾರ್ಮಿಕರು ಹಾಗೂ ದಿನನಿತ್ಯ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಜನರಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗಿದೆ. ಜನಸಾಮಾನ್ಯರ ಹಿತಾಸಕ್ತಿಯನ್ನು ಕಡೆಗಣಿಸಿ ಕೈಗೊಳ್ಳುವ ಇಂತಹ ನಿರ್ಧಾರಗಳು ಸಾರ್ವಜನಿಕರ ಬದುಕನ್ನು ಮತ್ತಷ್ಟು ದುಸ್ತರಗೊಳಿಸುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ಸಮಿತಿ ಅಧ್ಯಕ್ಷ ರಫೀಕ್ ಪೊನ್ನೊಟ್ ಅವರು ಸ್ವಾಗತಿಸಿದರು. ರಹೀಂ ವಿಟ್ಲ ಅವರು ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ SDPI ಬಂಟ್ವಾಳ ಕ್ಷೇತ್ರ ಸಮಿತಿ ಸದಸ್ಯ ಅಬ್ದುಲ್ ಅಝೀಝ್ ಕಡಂಬು, ಕಲಂದರ್ ಪರ್ತಿಪ್ಪಾಡಿ, ರಫೀಕ್ ಕಂಬಳಬೆಟ್ಟು ಹಾಗೂ ಉನೈಸ್ ಮುಂತಾದವರು ಉಪಸ್ಥಿತರಿದ್ದರು.




