November 12, 2026

ಮಂಗಳೂರು: ಸ್ನೇಹಿತನ ಬ್ಯಾಂಕ್ ಅಕೌಂಟ್ ಸೈಬರ್ ವಂಚನೆಗೆ ಬಳಕೆ: ದೂರು ದಾಖಲು

0
image_editor_output_image-1172664505-1794426583667

ಮಂಗಳೂರು: ತನ್ನ ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ ಎಂದು ನಂಬಿಸಿ, ವಿದೇಶದಿಂದ ಬರುವ ಹಣವನ್ನು ವರ್ಗಾಯಿಸಿಕೊಂಡು ನಗದು ರೂಪದಲ್ಲಿ ನೀಡುವಂತೆ ಕೋರಿ ಸ್ನೇಹಿತನ ಖಾತೆಯನ್ನೇ ಸೈಬರ್ ವಂಚನೆಗೆ ಬಳಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸ್ನೇಹಿತನ ವಿರುದ್ಧ ಬೈಕಂಪಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂಗಾರಗುಂಡಿ ಕೈಗಾರಿಕಾ ಪ್ರದೇಶದ ನಿವಾಸಿ ಅಸ್ವೀರ್ (34) ವಿರುದ್ಧ ಮಹಮ್ಮದ್ ಝುಬೇರ್ ಅಲಿ (33) ಎಂಬವರು ದೂರು ನೀಡಿದ್ದಾರೆ.

ದೂರುದಾರ ಮಹಮ್ಮದ್ ಝುಬೇರ್ ಅಲಿ ಹಾಗೂ ಅಸ್ವೀರ್ ಸ್ನೇಹಿತರಾಗಿದ್ದರು. 2025ರ ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ಅಸ್ವೀರ್, ಝುಬೇರ್ ಹಿಂದೆ ಕೆಲಸ ಮಾಡುತ್ತಿದ್ದ ಬೈಕಂಪಾಡಿಯ ಮೊಬೈಲ್ ಅಂಗಡಿಗೆ ಬಂದಿದ್ದನು. ತನ್ನ ಬ್ಯಾಂಕ್ ಖಾತೆ ಬ್ಲಾಕ್ ಆಗಿರುವುದರಿಂದ, ವಿದೇಶದಿಂದ ಬರುವ ಹಣವನ್ನು ಝುಬೇರ್ ಅವರ ಕೆನರಾ ಬ್ಯಾಂಕ್ ಖಾತೆಗೆ ವರ್ಗಾಯಿಸುವುದಾಗಿ ಮತ್ತು ಅದನ್ನು ನಗದು ರೂಪದಲ್ಲಿ ವಿತ್‌ಡ್ರಾ ಮಾಡಿ ಕೊಡುವಂತೆ ಪದೇಪೇದೆ ವಿನಂತಿಸಿಕೊಂಡಿದ್ದನು.

ಸ್ನೇಹಿತನ ಮಾತನ್ನು ನಂಬಿದ ಝುಬೇರ್ ಒಪ್ಪಿಗೆ ಸೂಚಿಸಿದ್ದರು. ಅದರಂತೆ 2025ರ ಮಾರ್ಚ್ 10ರಂದು ಆರ್‌ಟಿಜಿಎಸ್‌ (RTGS) ಮೂಲಕ ₹5,20,000 ಹಣ ಝುಬೇರ್ ಅವರ ಕೆನರಾ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು. ತಕ್ಷಣವೇ ಅಸ್ವೀರ್ ಸ್ಕ್ರೀನ್‌ಶಾಟ್ ಕಳುಹಿಸಿ ಹಣ ಡ್ರಾ ಮಾಡಿಕೊಡುವಂತೆ ವಾಟ್ಸ್‌ಆಪ್ ಕರೆ ಮಾಡಿ ತಿಳಿಸಿದ್ದನು. ಅದೇ ದಿನ ಮಧ್ಯಾಹ್ನ 3 ಗಂಟೆಗೆ ಇಬ್ಬರೂ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದ ಕೆನರಾ ಬ್ಯಾಂಕ್ ಶಾಖೆಗೆ ಹೋಗಿದ್ದರು. ಅಸ್ವೀರ್ ಕಾರಿನೊಳಗೆ ಕುಳಿತುಕೊಂಡು, ಝುಬೇರ್ ಅವರನ್ನು ಬ್ಯಾಂಕಿನೊಳಗೆ ಕಳುಹಿಸಿ ಚೆಕ್ ಮೂಲಕ ₹5,10,000 ಹಣವನ್ನು ಡ್ರಾ ಮಾಡಿಸಿ ತಂದುಕೊಂಡಿದ್ದನು.

ಬಳಿಕ ತಮ್ಮ ಬ್ಯಾಂಕ್ ಖಾತೆಯ ಮೇಲೆ ಆನ್‌ಲೈನ್ ದೂರುಗಳು ದಾಖಲಾಗಿರುವ ಬಗ್ಗೆ ತಿಳಿದು ಝುಬೇರ್ ಬ್ಯಾಂಕಿಗೆ ತೆರಳಿ ವಿಚಾರಿಸಿದಾಗ ಅಸಲಿ ವಿಚಾರ ಹೊರಬಿದ್ದಿದೆ. ಸೈಬರ್ ವಂಚನೆಯ ಕೃತ್ಯದ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿ, ಬಳಿಕ ಚೆಕ್ ಮೂಲಕ ವಿತ್‌ಡ್ರಾ ಮಾಡಿಸುವ ಮೂಲಕ ವಂಚನೆ ಎಸಗಿರುವುದು ಗೊತ್ತಾಗಿದೆ. ಈ ಕುರಿತು ವಿವಿಧ ರಾಜ್ಯಗಳ ಪೊಲೀಸ್ ಠಾಣೆಗಳಲ್ಲಿ ಆನ್‌ಲೈನ್ ದೂರುಗಳು ದಾಖಲಾಗಿರುವುದು ತಿಳಿದುಬಂದಿದ್ದು, ಮೋಸ ಹೋದ ಝುಬೇರ್ ಅಲಿ ಅವರು ಅಸ್ವೀರ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!