November 11, 2026

ಮಣಿಪಾಲ: ಅಕ್ರಮವಾಗಿ ಗುಂಪು ಕಟ್ಟಿಕೊಂಡು ಹೊಡೆದಾಟ: ವೈರಲ್ ವಿಡಿಯೊ ಆಧರಿಸಿ 11 ಯುವಕರು, ಇತರರ ವಿರುದ್ಧ ಮಣಿಪಾಲ FIR ದಾಖಲು

0
image_editor_output_image441620584-1794368218191

ಮಣಿಪಾಲ: ರಾಷ್ಟ್ರೀಯ ಹೆದ್ದಾರಿ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಪರಸ್ಪರ ಹೊಡೆದಾಡಿಕೊಂಡು, ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿದಂತೆ ವೈರಲ್ ವಿಡಿಯೊ ಆಧರಿಸಿ 11 ಯುವಕರು ಸೇರಿದಂತೆ ಇತರರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರ್ಷ್‌ ಅಮಿತ್‌ ಶಂಕರ್‌, ಉತ್ಕರ್ಷ್‌, ವಿನಾಯಕ ಭಾರದ್ವಾಜ್‌, ವೇದಾಂತ್‌ ಶಂಕರ್, ಚೇತನ್‌, ಅಕ್ಷತ್‌ ಸಿಂಗ್‌, ಲಿನ್‌ ಪೊರ್ಡ್‌ ಲೆನಾಕ್ಸ್‌, ಅನುರಾಗ್‌ ಮುಖರ್ಜಿ, ಶುಭಂ ನಂದಿ, ಅರ್ಜುನ್‌ ಶಾ ಹಾಗೂ ಪ್ರಜ್ವಲ್‌ ಎಂಬುವವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಮಣಿಪಾಲದ ಈಶ್ವರ ನಗರ ಎಪಿಕೋಡ್‌ ಸೆಂಟರ್‌ ಎದುರು ರಾಷ್ಟ್ರೀಯ ಹೆದ್ದಾರಿ 169(A) ರ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯುವಕರ ಗುಂಪೊಂದು ಹೊಡೆದಾಡಿಕೊಳ್ಳುವ ದೃಶ್ಯಾವಳಿಗಳು ಇನ್ಸ್ಟಾಗ್ರಾಮ್ ಹಾಗೂ ವಾಟ್ಸ್‌ಆಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಹರಿದಾಡುತ್ತಿದ್ದವು.

ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯದಲ್ಲಿದ್ದ ಮಣಿಪಾಲ ಪೊಲೀಸ್‌ ಠಾಣೆಯ ಸಿದ್ದೇಶಿ ಜಿ.ಆರ್. ಅವರು ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಬಳಿಕ ದೃಶ್ಯಾವಳಿಯಲ್ಲಿದ್ದ ಯುವಕರ ಗುರುತು ಪತ್ತೆ ಹಚ್ಚಲು ಸಾರ್ವಜನಿಕರನ್ನು ವಿಚಾರಿಸಿದಾಗ, ಯುವಕರು ಪರಸ್ಪರ ಯಾವುದೋ ವಿಷಯಕ್ಕೆ ಗಲಾಟೆ ಮಾಡಿಕೊಂಡು ಹೊಡೆದಾಡಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳು ರಾಷ್ಟ್ರೀಯ ಹೆದ್ದಾರಿ 169(A) ರ ಸಾರ್ವಜನಿಕ ರಸ್ತೆಯಲ್ಲಿ ಬೈಕ್‌ಗಳನ್ನು ನಿಲ್ಲಿಸಿಕೊಂಡು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಜಗಳವಾಡಿದ್ದಾರೆ. ಈ ಮೂಲಕ ಹೆದ್ದಾರಿಯಲ್ಲಿ ಚಲಿಸುವ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ್ದಲ್ಲದೆ, ಸಾರ್ವಜನಿಕರ ನೆಮ್ಮದಿಗೆ ಭಂಗ ತಂದು ಭೀತಿಯಾತಾವರಣ ನಿರ್ಮಿಸಿದ್ದಾರೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!