ಸುರತ್ಕಲ್: ಲಾರಿ, ಸ್ಕೂಟರ್ ನಡುವೆ ಅಪಘಾತ: ಹಳೆಯಂಗಡಿ ನಿವಾಸಿ ಮೃತ್ಯು
ಸುರತ್ಕಲ್: ಸುರತ್ಕಲ್ ಸಮೀಪದ ಬೈಕಂಪಾಡಿಯಲ್ಲಿ ಸೋಮವಾರ ಬೆಳಿಗ್ಗೆ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ.
ಹಳೆಯಂಗಡಿ ಕದಿಕೆ ನಿವಾಸಿ ಇಮ್ತಿಯಾಝ್ (39) ಮೃತಪಟ್ಟ ಸವಾರ ಎಂದು ಗುರುತಿಸಲಾಗಿದೆ.
ಸ್ಥಳೀಯ ಮೂಲಗಳ ಪ್ರಕಾರ, ಇಮ್ತಿಯಾಝ್ ಅವರು ಖಾಸಗಿ ಶಿಪ್ಪಿಂಗ್ ಕಂಪನಿಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಸೋಮವಾರ ಬೆಳಿಗ್ಗೆ ಪಣಂಬೂರಿನಲ್ಲಿರುವ ತಮ್ಮ ಕಂಪನಿಯ ಲಾರಿ ಕಚೇರಿಗೆ ಕೆಲಸದ ನಿಮಿತ್ತ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
ಚಲಿಸುತ್ತಿದ್ದ ಲಾರಿ ಹಾಗೂ ಇಮ್ತಿಯಾಝ್ ಅವರ ಸ್ಕೂಟರ್ ನಡುವೆ ತೀವ್ರ ಸ್ವರೂಪದ ಡಿಕ್ಕಿ ಸಂಭವಿಸಿದ್ದು, ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆ ನಡೆದ ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಇಮ್ತಿಯಾಝ್ ಅವರನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಗಾಯಗಳ ತೀವ್ರತೆಯಿಂದಾಗಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.




