ಬಂಟ್ವಾಳ: ಬೈಕಿಗೆ ಹಿಂಬದಿಯಿಂದ ಕಾರು ಢಿಕ್ಕಿ: ಸಹಸವಾರ ಮೃತ್ಯು
ಬಂಟ್ವಾಳ: ಮಣ್ಣಾಪು ಬಳಿ ನಿಂತಿದ್ದ ಬೈಕಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸಹಸವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ನಾವೂರು ಗ್ರಾಮದ ಕನಪಾದೆ ನಿವಾಸಿ ಗೋಪಾಲ್ ಎಂದು ಗುರುತಿಸಲಾಗಿದೆ. ಈ ಅಪಘಾತವು ಅಕ್ಟೋಬರ್ 30 ರಂದು ಸಂಭವಿಸಿತ್ತು.
ಗೋಪಾಲ್ ಅವರು ಝಕಾರಿಯಾ ಎಂಬುವವರು ಚಲಾಯಿಸುತ್ತಿದ್ದ ಬೈಕಿನಲ್ಲಿ ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದರು. ಗಂಜೀಮಠದ ಕೆಂಪು ಕಲ್ಲು ಕೋರೆಯಲ್ಲಿ ಕೆಲಸ ಮುಗಿಸಿ ಬಿ.ಸಿ.ರೋಡ್ ಮತ್ತು ಬೆಳ್ತಂಗಡಿ ರಸ್ತೆ ಮೂಲಕ ಕನಪಾದೆಯ ತಮ್ಮ ಮನೆಗೆ ಮರಳುತ್ತಿದ್ದರು.
ರಾತ್ರಿ ವೇಳೆಗೆ ಮಣ್ಣಾಪು ತಲುಪಿದಾಗ, ಅದೇ ಸ್ಥಳದಲ್ಲಿ ನಡೆದಿದ್ದ ಮತ್ತೊಂದು ಅಪಘಾತದಿಂದಾಗಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ರಸ್ತೆ ತಡೆಯಾಗಿದ್ದರಿಂದ ಝಕಾರಿಯಾ ಬೈಕನ್ನು ನಿಲ್ಲಿಸಿದ್ದರು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕಾರೊಂದು ನಿಂತಿದ್ದ ಬೈಕಿಗೆ ರಭಸವಾಗಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ.
ಅಪಘಾತದ ರಭಸಕ್ಕೆ ಇಬ್ಬರೂ ಗಾಯಗೊಂಡಿದ್ದರು. ಗೋಪಾಲ್ ಅವರ ತಲೆ, ಎದೆ, ಕೈ, ಕಾಲು ಮತ್ತು ಮೂಗಿಗೆ ಗಂಭೀರ ಗಾಯಗಳಾಗಿತ್ತು. ಝಕಾರಿಯಾ ಅವರ ಮುಖ ಮತ್ತು ಬೆನ್ನಿಗೆ ಗಾಯಗಳಾಗಿದ್ದವು.
ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು.
ಗಂಭೀರವಾಗಿ ಗಾಯಗೊಂಡಿದ್ದ ಗೋಪಾಲ್ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅಂದು ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ.




