ಉಡುಪಿ: ನೈಟ್ ಕರ್ಫ್ಯೂ ಉಲ್ಲಂಘಿಸಿ ಮದುವೆ ರಿಸೆಪ್ಶನ್:
ಮದುಮಗ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲು
ಉಡುಪಿ: ತಡರಾತ್ರಿಯವರೆಗೂ ಡಿ.ಜೆ ಹಾಕಿ ಕುಣಿಯುತ್ತಿದ್ದ ಮದುಮಗ ಸೇರಿದಂತೆ ನಾಲ್ವರ ವಿರುದ್ಧ ಉಡುಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ಉಡುಪಿ ನಗರಸಭೆ ವ್ಯಾಪ್ತಿಯ 76 ಬಡಗುಬೆಟ್ಟು ಗ್ರಾಮದ ಪಣಿಯಾಡಿಯಲ್ಲಿ ನಡೆದಿದೆ.
ನಗರಸಭೆ ವ್ಯಾಪ್ತಿಯ 76 ಬಡಗುಬೆಟ್ಟು ಗ್ರಾಮದ ಪಣಿಯಾಡಿಯಲ್ಲಿ ಶಿವರಾಮ ಶೆಟ್ಟಿಗಾರ್ ಅವರ ಮನೆಯಲ್ಲಿ ಮದುವೆ ರಿಸೆಪ್ಶನ್ ಈ ಕಾರ್ಯಕ್ರಮ ನಡೆಯುತ್ತಿದ್ದು, ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಮದುಮಗ, ಮದು ಮಗನ ತಂದೆ, ಡಿಜೆ ಮಾಲೀಕ ಹಾಗೂ ಡಿಜೆ ಆಪರೇಟರ್ ವಿರುದ್ಧ ಪ್ರಕರಣ ದಾಖಲಾಗಿದೆ. ಇವರಿಗೆಲ್ಲ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ನೈಟ್ ಕರ್ಫ್ಯೂ ಆದೇಶ ಜಾರಿಯಲ್ಲಿದ್ದು, ರಾತ್ರಿ 10 ಗಂಟೆಯ ಬಳಿಕ ಯಾವುದೇ ಸಭೆ, ಸಮಾರಂಭಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಆದರೆ ಪಣಿಯಾಡಿಯಲ್ಲಿ ಮದುವೆ ರಿಸೆಪ್ಶನ್ ಹೆಸರಿನಲ್ಲಿ ತಡ ರಾತ್ರಿ ತನಕವೂ ಏರು ಧ್ವನಿಯಲ್ಲೇ ಡಿಜೆ ಹಾಕಿಕೊಂಡು ಸಂಭ್ರಮಿಸಲಾಗಿತ್ತು. ಈ ಬಗ್ಗೆ ನಗರ ಠಾಣೆಯ ಪೊಲೀಸರಿಗೆ ಸಾರ್ವಜನಿಕರೊಬ್ಬರು ಕರೆ ಮಾಡಿ ಮಾಹಿತಿ ನೀಡಿದ್ದು, ಎಸ್‌ಐ ವಾಸಪ್ಪ ನಾಯ್ಕ ಅವರು ಪ್ರೊಬೇಷನರಿ ಪಿಎಸ್‌ಐ ಮತ್ತು ಗಸ್ತು ಸಿಬ್ಬಂದಿ ಹಾಗೂ ಠಾಣೆಯ ಪ್ರಭಾರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.




