November 1, 2026

39 ವರ್ಷಗಳ ಕಂಬಳ ಸೇವೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ: ಕಂಬಳ ಕ್ಷೇತ್ರದ ಸಾಧಕ ವಿನ್ಸೆಂಟ್ ಪಿಂಟೋ ಅವರಿಗೆ ಅಭಿನಂದನೆಗಳ ಮಹಾಪೂರ

0
image_editor_output_image-986341804-1793509232100

ಅಲ್ಲಿಪಾದೆ: ಕಂಬಳ ಕ್ಷೇತ್ರದಲ್ಲಿ ಕಳೆದ 39 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಾ, ಸಾಂಪ್ರದಾಯಿಕ ಕಂಬಳ ಕ್ರೀಡೆಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಅಲ್ಲಿಪಾದೆ ಕೆಳಗಿನಮನೆಯ ಶ್ರೀ ವಿನ್ಸೆಂಟ್ ಪಿಂಟೋ ಅವರು 2026ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಂಬಳದ ಮೇಲಿನ ಅಪಾರ ಪ್ರೀತಿ, ಅಭಿಮಾನ ಹಾಗೂ ಸಮರ್ಪಣಾ ಮನೋಭಾವದಿಂದ ಸುದೀರ್ಘ ಕಾಲ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿನ್ಸೆಂಟ್ ಪಿಂಟೋ ಅವರು ಕೋಣಗಳ ಮಾಲೀಕರಾಗಿ ಹಾಗೂ ಸ್ವತಃ ಓಟಗಾರರಾಗಿ ಗುರುತಿಸಿಕೊಂಡಿದ್ದಾರೆ.

ಕಂಬಳ ಕ್ಷೇತ್ರದಲ್ಲಿ 39 ವರ್ಷಗಳ ಅನುಭವ ಹೊಂದಿರುವ ಇವರು, ಕೋಣಗಳ ಮಾಲೀಕರಾಗಿ 90ಕ್ಕೂ ಅಧಿಕ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ, ಸ್ವತಃ ಓಟಗಾರರಾಗಿ ಕಂಬಳದ ಕಣದಲ್ಲಿ ಸ್ಪರ್ಧಿಸಿ 30ಕ್ಕೂ ಅಧಿಕ ಪದಕಗಳನ್ನು ಗಳಿಸಿರುವುದು ಇವರ ಸಾಧನೆಗೆ ಸಾಕ್ಷಿಯಾಗಿದೆ.

ಕೋಣಗಳ ಸಾಕಾಣಿಕೆ, ತರಬೇತಿ ಹಾಗೂ ಕಂಬಳ ಸ್ಪರ್ಧೆಗಳಲ್ಲಿ ನಿರಂತರ ಪರಿಶ್ರಮದ ಮೂಲಕ ತಮ್ಮದೇ ಆದ ಗುರುತನ್ನು ಮೂಡಿಸಿರುವ ಇವರು, ಸಾಂಪ್ರದಾಯಿಕ ಕ್ರೀಡೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಕಂಬಳ ಕ್ಷೇತ್ರದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಸಲ್ಲಿಸಿದ ಸೇವೆ, ಸಾಧನೆ ಹಾಗೂ ಸಮರ್ಪಣೆಯನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಕಂಬಳಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

39 ವರ್ಷಗಳ ಕಂಬಳ ಪಯಣಕ್ಕೆ ಸಂದ ಗೌರವ, ಸಾಧನೆಗೆ ದೊರೆತ ಸನ್ಮಾನವಾಗಿದ್ದು, ಶ್ರೀ ವಿನ್ಸೆಂಟ್ ಪಿಂಟೋ ಅವರಿಗೆ ವಿವಿಧ ಕ್ಷೇತ್ರಗಳ ಗಣ್ಯರು, ಕಂಬಳಾಭಿಮಾನಿಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!