ಕಾಪು: ಬೀಚ್‌ನಲ್ಲಿ ಪ್ರವಾಸಿಗರಿಗೆ ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ
ಕಾಪು: ಕಾಪು ಹಾಗೂ ಮಟ್ಟು ಬೀಚ್ ಭಾಗಗಳಿಗೆ ಆಗಮಿಸುವ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಾಪು ಪೊಲೀಸರು ಉಳಿಯಾರಗೋಳಿ ಯಾರ್ಡ್ ಬೀಚ್ ಬಳಿ ದಾಳಿ ನಡೆಸಿ ಬಂಧಿಸಿದ್ದಾರೆ. ಕಾಪು ತಾಲೂಕಿನ ಬೆಳಪು ವಿನಯನಗರ ನಿವಾಸಿ ಆರೀಫ್ (38) ಹಾಗೂ ಉಡುಪಿ ಪಡುತೋನ್ಸೆ ಗ್ರಾಮದ ಹೂಡೆ ನಿವಾಸಿ ಅಕೀಫ್ (34) ಬಂಧಿತ ಆರೋಪಿಗಳು. ಬಂಧಿತರಿಂದ ಬರೋಬ್ಬರಿ ₹2,85,000 ಮೌಲ್ಯದ 5.710 ಕಿಲೋ ಗ್ರಾಂ ಗಾಂಜಾ, ನಗದು ಹಾಗೂ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.
ಅಕ್ಟೋಬರ್ 27ರಂದು ಬೆಳಿಗ್ಗೆ 11:00 ಗಂಟೆಗೆ ಕಾಪು ವೃತ್ತ ನಿರೀಕ್ಷಕರಾದ ಅಜ್ಮತ್ ಆಲಿ ಅವರಿಗೆ ಬಂದ ಖಚಿತ ಮಾಹಿತಿ ಆಧರಿಸಿ, ತಕ್ಷಣವೇ ಕ್ರಮ ಕೈಗೊಳ್ಳಲು ಕಾಪು ಠಾಣಾ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ತೇಜಸ್ವಿ ಟಿ. ಐ. ಅವರಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಮಧ್ಯಾಹ್ನ 12:05 ಗಂಟೆಗೆ ಪೊಲೀಸ್ ತಂಡವು ಉಳಿಯಾರಗೋಳಿ ಗ್ರಾಮದ ಯಾರ್ಡ್ ಬೀಚ್ ಬಳಿ ದಾಳಿ ನಡೆಸಿದಾಗ, ಆರೋಪಿಗಳಿಬ್ಬರೂ ಪ್ರವಾಸಿಗರಿಗೆ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಇಟ್ಟುಕೊಂಡು ಅನುಮಾನಾಸ್ಪದವಾಗಿ ನಿಂತಿರುವುದು ಕಂಡುಬಂದಿದೆ.
ಪೊಲೀಸರು ಆರೋಪಿಗಳನ್ನು ತಕ್ಷಣವೇ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕೆಳಗಿನ ಸೊತ್ತುಗಳು ಪತ್ತೆಯಾಗಿವೆ:
ಗಾಂಜಾ: 5.710 ಕಿ.ಗ್ರಾಂ (ಅಂದಾಜು ಮೌಲ್ಯ ₹2,85,000/-)
ನಗದು: ₹225/-ಮೊಬೈಲ್ ಫೋನ್‌ಗಳು: 2
ವಿಚಾರಣೆ ವೇಳೆ ಆರೋಪಿಗಳು ಈ ಗಾಂಜಾವನ್ನು ಆಂಧ್ರಪ್ರದೇಶ ರಾಜ್ಯದ ಹೈದರಾಬಾದ್‌ನಿಂದ ತಂದು ಕರಾವಳಿಯ ಪ್ರವಾಸಿ ತಾಣಗಳಲ್ಲಿ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಬಂಧಿತ ಆರೋಪಿಗಳಿಬ್ಬರೂ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 141/2026, ಮಾದಕ ವಸ್ತುಗಳ ಕಾಯ್ದೆ (NDPS Act 1985) ಕಲಂ 8(c) ಹಾಗೂ 20(b)(ii)(B) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.




