October 26, 2026

ಕೋಟ: ರಸ್ತೆ ದಾಟುತ್ತಿದ್ದಾಗ ಸವಾರನಿಗೆ ಕಾರು ಢಿಕ್ಕಿ: RSS ಮುಖಂಡ ಸಾವು

0
image_editor_output_image1448517156-1793005777595

ಕೋಟ: ರಸ್ತೆ ದಾಟುತ್ತಿದ್ದ ಸೈಕಲ್‌ ಸವಾರನಿಗೆ ಕಾರು ಡಿಕ್ಕಿಯಾದ ಪರಿಣಾಮ, ಹಿರಿಯ ಆರ್‌ಎಸ್‌ಎಸ್‌ ಸದಸ್ಯ ಹಾಗೂ ಕಾರ್ಪೊರೇಷನ್‌ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಕೋಟ ಗುರುದಾಸ್‌ ಶೆಣೈ (65) ಅವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಕೋಟ ಅಮೃತೇಶ್ವರೀ ಸರ್ಕಲ್‌ನಲ್ಲಿ ಸೋಮವಾರ ಬೆಳ್ಳಂಬೆಳಿಗ್ಗೆ ಸಂಭವಿಸಿದೆ.

ಗುರುದಾಸ್ ಶೆಣೈಯವರು ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ಸ್ಥಳೀಯ ಪರಿಸರದಲ್ಲಿ ಹೂವು ಸಂಗ್ರಹಿಸಿ ದೇವಸ್ಥಾನಕ್ಕೆ ನೀಡುವ ನಿತ್ಯ ಕಾಯಕ ಹೊಂದಿದ್ದರು. ಸೋಮವಾರ ಬೆಳಿಗ್ಗೆ ಕೂಡ ಹೂವು ಸಂಗ್ರಹಿಸಿಕೊಂಡು ಸೈಕಲ್‌ನಲ್ಲಿ ರಸ್ತೆ ದಾಟುತ್ತಿದ್ದಾಗ, ಉಡುಪಿಯಿಂದ ಕುಂದಾಪುರ ಕಡೆಗೆ ಅತಿ ವೇಗವಾಗಿ ಸಂಚರಿಸುತ್ತಿದ್ದ ಕಾರು ಸೈಕಲ್‌ಗೆ ಭೀಕರವಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ಶೆಣೈಯವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಕಾರು ಚಾಲಕ, ಬೀಜಾಡಿ ನಿವಾಸಿ ಪ್ರದೀಪ್ ಕಾಂಚನ್ ಅವರಿಗೂ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೃತ ಗುರುದಾಸ್ ಶೆಣೈಯವರು ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಆರ್.ಎಸ್.ಎಸ್. ಸಂಘಟನೆಯ ಸಕ್ರಿಯ ಮತ್ತು ಕಟ್ಟಾ ಕಾರ್ಯಕರ್ತರಾಗಿದ್ದ ಇವರು, ಯುವ ಸ್ವಯಂಸೇವಕರಿಗೆ ಶಾಖೆಗಳನ್ನು ನಡೆಸಿಕೊಡುತ್ತಿದ್ದರು.

ಭಾನುವಾರವಷ್ಟೇ ಕೋಟದಲ್ಲಿ ಸಂಭ್ರಮದಿಂದ ನಡೆದ ವಿಜಯದಶಮಿ ಪಥಸಂಚಲನದಲ್ಲೂ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಕೋಟ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!