September 28, 2026

ಮಂಗಳೂರಿನಲ್ಲಿ ಅಕ್ರಮ ವಿದೇಶಿ ಉದ್ಯೋಗ ಜಾಲ:
ಜಾಬ್ ಕನ್ಸಲ್ಟೆನ್ಸಿ ವಿರುದ್ದ ಎಫ್‌ಐಆರ್‌ ದಾಖಲು

0
image_editor_output_image-2130720439-1790536608237

ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಗೆ ಮೋಸ ಮಾಡಲು ಯತ್ನಿಸುತ್ತಿದ್ದ ಪಂಪ್‌ವೆಲ್‌ನ ಖಾಸಗಿ ಸಂಸ್ಥೆಯೊಂದರ ವಿರುದ್ಧ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ದೂರಿನನ್ವಯ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ಲೋಟಸ್ ಗೆಲಾಕ್ಸಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ‘M/s Orla Career Solutions’ ಸಂಸ್ಥೆಯು ಕಾನೂನುಬಾಹಿರವಾಗಿ ವಿದೇಶಿ ಉದ್ಯೋಗ ಸಂದರ್ಶನ ಆಯೋಜಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಧೀನದಲ್ಲಿರುವ ಬೆಂಗಳೂರಿನ ‘ಪ್ರೊಟೆಕ್ಟರ್ ಆಫ್ ಎಮಿಗ್ರಾಂಟ್ಸ್’ ಕಚೇರಿಗೆ ಸೆಪ್ಟೆಂಬರ್ 25, 2026 ರಂದು ದೂರು ಇಮೇಲ್ ಬಂದಿತ್ತು. ಅದರಂತೆ, ‘ಓರ್ಲಾ ಕರಿಯರ್ ಸೊಲ್ಯೂಷನ್ಸ್’ ಸಂಸ್ಥೆಯು ಎಮಿಗ್ರೇಷನ್ ಆಕ್ಟ್ 1983  ರ ಅಡಿಯಲ್ಲಿ ಯಾವುದೇ ಕಡ್ಡಾಯ ನೋಂದಣಿ ಅಥವಾ ಇಲಾಖೆಯಿಂದ ಅಗತ್ಯ ಪರವಾನಗಿಯನ್ನು ಪಡೆಯದೆ ಅನಧಿಕೃತವಾಗಿ ಕಾರ್ಯಾಚರಿಸುತ್ತಿತ್ತು.

ಸದರಿ ಸಂಸ್ಥೆಯು ಯುರೋಪ್ ಖಂಡದ ‘ಲಕ್ಸಂಬರ್ಗ್’ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸೆಪ್ಟೆಂಬರ್ 24 ರಿಂದ ಸೆಪ್ಟೆಂಬರ್ 26, 2026 ರವರೆಗೆ ಅಭ್ಯರ್ಥಿಗಳಿಗೆ ಅನಧಿಕೃತವಾಗಿ ನೇಮಕಾತಿ ಸಂದರ್ಶನ (Walk-in Interview) ಆಯೋಜಿಸಿರುವ ಬಗ್ಗೆ ಇತ್ತೀಚೆಗೆ ಸಾರ್ವಜನಿಕ ಜಾಹೀರಾತು ನೀಡಿತ್ತು. ಈ ಬಗ್ಗೆ ಬೆಂಗಳೂರಿನ ‘ಪ್ರೊಟೆಕ್ಟರ್ ಆಫ್ ಎಮಿಗ್ರಾಂಟ್ಸ್’ ಕಚೇರಿಯಿಂದ (ಪತ್ರ ಸಂಖ್ಯೆ: No. PoEB/385/14/2026-02) ಸೆಪ್ಟೆಂಬರ್ 25 ರಂದು ಕಂಕನಾಡಿ ನಗರ ಪೊಲೀಸ್ ಠಾಣೆಯ ಅಧಿಕೃತ ಇಮೇಲ್‌ಗೆ ದೂರು ತಲುಪಿದೆ.

ಯಾವುದೇ ಪೂರ್ವ ಪರವಾನಗಿ ಇಲ್ಲದೆ ವಿದೇಶದಲ್ಲಿ ಉದ್ಯೋಗದ ಸುಳ್ಳು ಆಶ್ವಾಸನೆ ನೀಡುವುದು, ಹಣ ವಸೂಲಿ ಮಾಡುವುದು ಹಾಗೂ ಸಾರ್ವಜನಿಕರಿಗೆ ವಂಚಿಸುವ ಉದ್ದೇಶದಿಂದ ನೇಮಕಾತಿ ಪ್ರಕ್ರಿಯೆ ನಡೆಸುವುದು ಎಮಿಗ್ರೇಷನ್ ಆಕ್ಟ್ 1983 ರ ಕಲಂ 10 ಮತ್ತು 24 ರ ಅಡಿಯಲ್ಲಿ ಗಂಭೀರ ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿಕೊಂಡು, ಕಾನೂನುಬಾಹಿರ ಕೃತ್ಯದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿದೇಶಾಂಗ ಇಲಾಖೆಯ ಅಧಿಕಾರಿಗಳು ದೂರಿನಲ್ಲಿ ಒತ್ತಾಯಿಸಿದ್ದಾರೆ. ದೂರಿನ ಆಧಾರದ ಮೇಲೆ ಕಂಕನಾಡಿ ನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಸಂಸ್ಥೆಯ ಮಾಲೀಕರು ಹಾಗೂ ಆಡಳಿತ ಮಂಡಳಿಯ ವಿರುದ್ಧ ತನಿಖೆ ಚುರುಕುಗೊಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!